ಬೆಂಗಳೂರು,ಆ 05 : ರಾಜ್ಯ ಪೊಲೀಸ್ ಕ್ಯಾಪ್ನ ವಿನ್ಯಾಸದಲ್ಲಿ ಶೀಘ್ರವೇ ಬದಲಾವಣೆಗಳಾಗಲಿದೆ. ಈಗ ಬಳಕೆಯಲ್ಲಿರುವ ಸ್ಲೊಚಾಟ್ ಕ್ಯಾಪ್ ಕಾನ್ಸ್ಟೇಬಲ್ಗಳ ಆರೋಗ್ಯದ ಮೇಲೆ ಅಡ್ಡ ಪರಿಣಾಮ ಬೀರುತ್ತಿರುವುದಾಗಿ ಕೇಂದ್ರ ಆರೋಗ್ಯ ಇಲಾಖೆ ವರದಿ ನೀಡಿತ್ತು. ಈ ಹಿನ್ನೆಲೆಯಲ್ಲಿ ಕಾನ್ಸ್ಟೇಬಲ್ಗಳಿಗೆ ತಮಿಳುನಾಡು ಪೊಲೀಸರ ಮಾದರಿಯ ಪೀಕ್-ಕ್ಯಾಪ್ ಧರಿಸಲು ಅವಕಾಶ ಮಾಡಿಕೊಡಲು ತೀರ್ಮಾನಿಸಲಾಗಿದೆ. ಆಗಸ್ಟ್ 04 ರಂದು ನಡೆದ ಡಿಜಿ ಮತ್ತು ಐಜಿಪಿ ಕಚೇರಿಯಲ್ಲಿ ಪೊಲೀಸ್ ಮಹಾನಿರ್ದೇಶಕಿ ನೀಲಮಣಿ ಎನ್.ರಾಜು ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಪೇದೆಗಳ ಕ್ಯಾಪ್ ಹಾಗೂ ಸಮವಸ್ತ್ರ ಬದಲಾವಣೆ ಕುರಿತು ಗಂಭೀರ ಚರ್ಚೆ ನಡೆದಿದೆ.
ಒಂದು ವೇಳೆ ಎಲ್ಲವೂ ಅಂದುಕೊಂಡಂತೆ ನಡೆದರೆ ಪೊಲೀಸ್ ಇನ್ಸ್ಪೆಕ್ಟರ್ಗಳು ಧರಿಸುವ ಮಾದರಿಯಲ್ಲಿ ರಾಜ್ಯದ ಸಾವಿರಾರು ಮಂದಿ ಪೇದೆಗಳು ಇನ್ಮುಂದೆ ಪೀಕ್-ಕ್ಯಾಪ್ ಧರಿಸಲಿದ್ದಾರೆ. ಈಗ ಜಾರಿಯಲ್ಲಿರುವ ಟೋಪಿ ವಿನ್ಯಾಸ ಪೊಲೀಸ್ ಸಿಬ್ಬಂದಿ ಆರೋಗ್ಯಕ್ಕೆ ಪೂರಕವಾಗಿಲ್ಲ, ಈ ಟೋಪಿ ಧರಿಸುವುದರಿಂದ ಕುತ್ತಿಗೆ ನೋವು, ತಲೆ ನೋವಿಗೆ ಕಾರಣವಾಗುತ್ತಿದೆ ಎನ್ನುವುದಾಗಿ ಕೇಂದ್ರ ಆರೋಗ್ಯ ಇಲಾಖೆ ರಾಜ್ಯ ಪೊಲೀಸ್ ಇಲಾಖೆಗೆ ವರದಿ ನೀಡಿತ್ತು. ಹೀಗಾಗಿ ಈ ಸಂಬಂಧ ಪೊಲೀಸ್ ಹಿರಿಯ ಅಧಿಕಾರಿಗಳು ಗಂಭೀರ ಚರ್ಚೆ ನಡೆಸಿದ್ದರು. ಅದಕ್ಕಾಗಿ ತಮಿಳುನಾಡು ಪೊಲೀಸ್ ಇಲಾಖೆ ಮಾದರಿಯಲ್ಲಿ ಪೀಕ್-ಕ್ಯಾಪ್ ಬಳಕೆ ಕುರಿತು ಚರ್ಚೆಗಳನ್ನು ನಡೆಸಲಾಗಿದೆ.