ಸುಬ್ರಹ್ಮಣ್ಯ, ಆ 05 : ಸರ್ಕಾರದ ಅಧೀನಕ್ಕೊಳಪಟ್ಟ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೂ ಸ್ಥಳೀಯ ಶ್ರೀ ಸಂಪುಟ ನರಸಿಂಹ ಸ್ವಾಮಿ ಮಠಕ್ಕೂ ,ಆಡಳಿತಾತ್ಮಕ, ಧಾರ್ಮಿಕ ಆಚರಣೆಗಳ ವಿಚಾರವಾಗಿ ಆಗಮೋಕ್ತ ಪೂಜಾ ಪದ್ದತಿಗಳ ಸಾಂಪ್ರದಾಯಿಕ ನೆಲೆಯಲ್ಲಿ ಯಾವುದೇ ಸಂಬಂಧವಿಲ್ಲ. ಉಭಯ ಸಂಸ್ಥೆಗಳು ಸ್ವತಂತ್ರ ಅಸ್ತಿತ್ವ ಹೊಂದಿದೆ ಎಂದು ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ನಿತ್ಯಾನಂದ ಮುಂಡೋಡಿ ಹಾಗೂ ದೇವಳದ ಕಾರ್ಯ ನಿರ್ವಹಣಾಧಿಕಾರಿ ಎಂ.ಎಚ್ ರವೀಂದ್ರ ಶನಿವಾರ ಪತ್ರಿಕಾಗೋಷ್ಟಿಯಲ್ಲಿ ತಿಳಿಸಿದ್ದಾರೆ.
ಉಭಯ ಸಂಸ್ಥೆಗಳು ಸ್ವತಂತ್ರ ಅಸ್ಥಿತ್ವ ಹೊಂದಿದ್ದು, ಇವು ಪ್ರತ್ಯೇಕವಾದ ಆಡಳಿತ ಹೊಂದಿದ ಹಿಂದೂ ಧಾರ್ಮಿಕ ಸಂಸ್ಥೆಯಾಗಿದೆ. ಕುಕ್ಕೆ ಶ್ರೀ ಸುಬ್ರಮಣ್ಯ ದೇವಸ್ಥಾನವೂ ನಾಗಾರಾಧನೆ ಸಹಿತ ಸ್ಕಂದನ ನೆಲೆ ಸಾನ್ನಿಧ್ಯವಿರುವ ದೇವಮಂದಿರವಾಗಿದ್ದು, ಶ್ರೀ ಮಠವು ಸಂಪುಟ ನರಸ್ವಾಮಿಯ ಸೆಲೆಯ ಸಾನಿಧ್ಯವಾಗಿದೆಯೆಂದು ಅವರು ತಿಳಿಸಿದ್ದಾರೆ. ಅನಾದಿ ಕಾಲದಿಂಅಲೂ ಕುಕ್ಕೆ ದೇವಳವು ಸರ್ಕಾರದ ಆದಳಿತ ನಿಯಂತ್ರಣಕ್ಕೆ ಒಳಪಟ್ತು ಆಡಳಿತಾತ್ಮಕ ಸೇರಿದಂತೆ ಪ್ರತಿಯೊಂದು ವಿಚಾರಗಳ ಬಗ್ಗೆ ಸೂಕ್ತವಾದ ದಾಖಲೆಗಳು ಇವೆ. ಕ್ಷೇತ್ರದ ಪಾವಿತ್ರ್ಯಕ್ಕೆ ಧಕ್ಕೆ ತರುವ ಸಾರ್ವಜನಿಕ ಭಕ್ರರಲ್ಲಿ ತಪ್ಪು ಸಂದೇಶ ನೀಡಿ ಗೊಂದಲ ಸೃಷ್ಟಿಸುವುದು ಖಂಡನೀಯವಾಗಿದ್ದು, ಅಂಥವರ ವಿರುದ್ದ ಕಾನೂನು ಕ್ರಮ ಕೈಗೊಳ್ಳಲು ಹಿಂಜರಿಯುವುದಿಲ್ಲ ಎಂದರು.