ಮಂಜೇಶ್ವರ, ಆ 05: ಸಹಪಾಠಿಯ ಇರಿತಕ್ಕೆ ಬಾಲಕನೊಬ್ಬ ಬಲಿಯಾದ ಘಟನೆ ಬಂದ್ಯೋಡು ಸಮೀಪದ ಅಡ್ಕ ಎಂಬಲ್ಲಿ ಆ 05 ರ ಭಾನುವಾರ ಸಂಭವಿಸಿದೆ. ಮೃತ ಬಾಲಕನನ್ನು ಬಂದ್ಯೋಡು ಸಮೀಪದ ಅಡ್ಕ ನಿವಾಸಿ ಯೂಸುಫ್ ಎಂಬವರ ಪುತ್ರ ಮುಹಮ್ಮದ್ ಮಿದ್ಲಾಜ್ (13) ಎಂದು ಗುರುತಿಸಲಾಗಿದೆ.
ಇಂದು ಬೆಳಗ್ಗೆ 8.15ರ ಸುಮಾರಿಗೆ ಘಟನೆ ನಡೆದಿದ್ದು, ಕ್ಷುಲಕ ಕಾರಣಕ್ಕಾಗಿ, ಇಬ್ಬರು ಸಹಪಾಠಿಗಳ ನಡುವೆ ಮಾತಿನ ಚಕಮಕಿ ನಡೆದಿದ್ದು, ಈ ಸಂದರ್ಭದಲ್ಲಿ ಮಿದ್ ಲಾಜ್ ಸಹಪಾಠಿ ಬಾಲಕನೋರ್ವ ಚೂರಿಯಿಂದ ಇರಿದಿದ್ದಾನೆ. ಇರಿತದಿಂದ ಗಂಭೀರ ಗಾಯಗೊಂಡ ಮಿದ್ ಲಾಜ್ ನನ್ನು ತಕ್ಷಣ ಬಂದ್ಯೋಡು ಆಸ್ಪತ್ರೆಗೆ ದಾಖಲಿಸಿದರೂ ಗಂಭೀರ ಗಾಯಗೊಂಡ ಬಾಲಕ ಕೊನೆಯುಸಿರೆಳೆದಿದ್ದಾನೆ. ಘಟನೆ ತಿಳಿದು ಸ್ಥಳಕ್ಕಾಗಮಿಸಿದ ಕುಂಬಳೆ ಸಿಐ ಪ್ರೇಂಸದನ್ ನೇತೃತ್ವದ ಪೊಲೀಸರು ಬಾಲಕನನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.