ಬೆಳ್ತಂಗಡಿ, ಆ 5: ವೇಣೂರು ಪೊಲೀಸ್ ಠಾಣಾ ವ್ಯಾಪ್ತಿಯ ಪೆರಾಡಿ ಗ್ರಾಮದಲ್ಲಿ ಅಪ್ರಾಪ್ತೆಯ ಮೇಲೆ ಅತ್ಯಾಚಾರವೆಸಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಬಾಲಕಿಗೆ ಪರಿಚಿತನಾದ ನೆರೆಯ ಕಾಶಿಪಟ್ಣ ಗ್ರಾಮದ ಓಲ್ಪಾಡಿ ನಿವಾಸಿ ಸತೀಶ್ ಯಾನೆ ಶಶಿ(21) ಎಂಬಾತನೇ ಅತ್ಯಾಚಾರವೆಸಗಿದ ಆರೋಪಿಯಾಗಿದ್ದಾನೆ. ಸಂತ್ರಸ್ತ ಬಾಲಕಿ ೯ನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದು ಆರು ತಿಂಗಳ ಗರ್ಭಿಣಿಯಾಗಿದ್ದಾಳೆ ಎಂದು ತಿಳಿದುಬಂದಿದೆ.
ಕೆಲದಿನಗಳ ಹಿಂದೆ ತಾಯಿ ಲೀಲಾ(೪೦) ತನ್ನ ಮಗಳನ್ನು ಶಿರ್ತಾಡಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಪರೀಕ್ಷೆ ನಡೆಸಿದಾಗ ಆರು ತಿಂಗಳ ಗರ್ಭಿಣಿಯಾಗಿದ್ದಾಳೆಂದು ತಿಳಿದು ಬಂದಿತ್ತು. ಈ ವಿಚಾರದಿಂದ ಆಘಾತಗೊಂಡ ತಾಯಿ ಮೂರು ದಿನಗಳ ಹಿಂದೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ವೇಣೂರು ಠಾಣೆಯಲ್ಲಿ ದೂರು ದಾಖಲಾಗಿತ್ತು. ಈ ಸಂದರ್ಭ ಲೀಲಾ ಅವರ ಪತಿ ತೀವ್ರ ಅನಾರೋಗ್ಯ ಪೀಡಿತರಾಗಿದ್ದು ಆಸ್ಪತ್ರೆಯಲ್ಲಿದ್ದರು. ಬಳಿಕ ಸಂಬಂಧಿಕರು ಸೇರಿ ಬಾಲಕಿಯೊಂದಿಗೆ ವೇಣೂರು ಠಾಣೆಗೆ ಹೋಗಿ ದೂರು ನೀಡಿದ್ದಾರೆ. ವೇಣೂರು ಪೊಲೀಸರು ತನಿಖೆ ನಡೆಸಿದ್ದು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.