ಕಾಸರಗೋಡು, ಆ 5: ಇಬ್ಬರು ವಿದ್ಯಾರ್ಥಿಗಳ ನಡುವೆ ಉಂಟಾದ ಘರ್ಷಣೆ ಓರ್ವನ ಸಾವಿನಲ್ಲಿ ಅಂತ್ಯಗೊಂಡ ಘಟನೆ ಬಂದ್ಯೋಡಿನ ಮುಟ್ಟಂ ಎಂಬಲ್ಲಿ ಇಂದು ಬೆಳಿಗ್ಗೆ ನಡೆದಿದೆ. ಮೃತಪಟ್ಟವನನ್ನು ಅಡ್ಕ ವೀರನಗರದ ಮುಹಮ್ಮದ್ ಮಿದ್ ಲಾಜ್(16) ಎಂದು ಗುರುತಿಸಲಾಗಿದೆ. ಸಹಪಾಠಿಯನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಸಹಪಾಠಿಗಳಾದ ವಿದ್ಯಾರ್ಥಿಗಳಿಬ್ಬರ ನಡುವೆ ಮುಟ್ಟಂನ ಮದ್ರಸವೊಂದರಲ್ಲಿ ಮಾತಿನ ಚಕಮಕಿ ನಡೆದು ಹೊಡೆದಾಡಿಕೊಂಡಿದ್ದು, ಈ ಸಂದರ್ಭದಲ್ಲಿ ಅಲ್ಲಿದ್ದ ಕತ್ತರಿಯಿಂದ ಮಿದ್ ಲಾಜ್ ನ ಎದೆಗೆ ಇರಿದಿದ್ದಾನೆ.
ಬೊಬ್ಬೆ ಕೇಳಿ ಬಂದ ಉಳಿದ ವಿದ್ಯಾರ್ಥಿಗಳು ಹಾಗೂ ಸಂಬಧಿಕರು ಕೂಡಲೇ ಸಮೀಪದ ಬಂದ್ಯೋಡು ಆಸ್ಪತ್ರೆಗೆ ತಲಪಿಸಿದರೂ ಜೀವ ಉಳಿಸಲಾಗಲಿಲ್ಲ. ಎದೆಗೆ ಗಂಭೀರ ಸ್ವರೂಪದ ಗಾಯವಾದುದುದೇ ಸಾವಿಗೆ ಕಾರಣವೆನ್ನಲಾಗಿದೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಪರಿಯಾರಂ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ. ಕೃತ್ಯ ನಡೆಸಿದ ಸಹಪಾಠಿಯನ್ನು ಕುಂಬಳೆ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಪೇಪರ್ ಕಟ್ಟಿಂಗ್ ಕುರಿತು ಇಬ್ಬರ ನಡುವೆ ಮಾತಿನ ಚಕಮಕಿ ನಡೆದು ಹೊಡೆದಾಟ ನಡೆದಿದ್ದು, ಈ ಸಂದರ್ಭದಲ್ಲಿ ಪೇಪರ್ ಕಟ್ಟಿಂಗ್ ಗೆ ಇಡಲಾಗಿದ್ದ ಕತ್ತರಿಯಿಂದ ಸಹಪಾಠಿಗೆ ಇರಿದಿರುವುದಾಗಿ ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.