ಮಂಜೇಶ್ವರ, ಆ 06: ಬೈಕ್ ಗಳಲ್ಲಿ ಬಂದ ನಾಲ್ವರು ಯುವಕರ ತಂಡವು ಸಿಪಿಎಂ ಕಾರ್ಯಕರ್ತನೊಬ್ಬನನ್ನು ಕೊಚ್ಚಿ ಕೊಲೆಗೈದಿದ್ದು, ಘಟನೆ ಹಿನ್ನಲೆಯಲ್ಲಿ ಮೂವರು ಬಿಜೆಪಿ ಕಾರ್ಯಕರ್ತರ ವಿರುದ್ದ ಪ್ರಕರಣ ದಾಖಲಾಗಿದೆ.
ಆ.5 ರ ಭಾನುವಾರ ತಡರಾತ್ರಿ ಉಪ್ಪಳದ ಸೋಂಕಾಲ್ ಎಂಬಲ್ಲಿ ಘಟನೆ ನಡೆದಿದ್ದು ಕೊಲೆಗೀಡಾದವರನ್ನು ಸೋಂಕಾಲ್ ನ ಅಬೂಬಕ್ಕರ್ ಸಿದ್ದಿಕ್ ಎಂದು ಗುರುತಿಸಲಾಗಿದೆ. ಗಂಭೀರ ಗಾಯಗೊಂಡ ಅಬೂಬಕ್ಕರ್ ಸಿದ್ದಿಕ್ ನ ಬೊಬ್ಬೆ ಕೇಳಿ ಸ್ಥಳಕ್ಕೆ ಧಾವಿಸಿ ಬಂದ ನಾಗರಿಕರು ರಕ್ತದ ಮಡುವಿನಲ್ಲಿ ಬಿದ್ದಿದ್ದ ಸಿದ್ದಿಕ್ ನನ್ನು ಮಂಗಳೂರು ಆಸ್ಪತ್ರೆಗೆ ತಲಪಿಸಿದರೂ ಜೀವ ಉಳಿಸಲಾಗಲಿಲ್ಲ.
ಕೃತ್ಯದ ಬಳಿಕ ಹಂತಕರು ಬೈಕನ್ನು ಸ್ಥಳದಲ್ಲೇ ಬಿಟ್ಟು ಪರಾರಿಯಾಗಿದ್ದಾರೆ . ಕತಾರ್ ನಲ್ಲಿ ಉದ್ಯೋಗದಲ್ಲಿದ್ದ ಸಿದ್ದಿಕ್ ಕೆಲ ದಿನಗಳ ಹಿಂದೆಯಷ್ಟೇ ಊರಿಗೆ ಬಂದಿದ್ದರು. ಇನ್ನು ಕೃತ್ಯವನ್ನು ಖಂಡಿಸಿ ಆಗಸ್ಟ್ 6 ರ ಮಧ್ಯಾಹ್ನ ಎರಡು ಗಂಟೆ ಯಿಂದ ಮಂಜೇಶ್ವರ ತಾಲೂಕು ವ್ಯಾಪ್ತಿಯಲ್ಲಿ ಹರತಾಳ ಕ್ಕೆ ಸಿಪಿಎಂ ಜಿಲ್ಲಾ ಸಮಿತಿ ಕರೆ ನೀಡಿದೆ.ಆದರೆ ಮಂಜೇಶ್ವರ ತಾಲೂಕಿನ ಹಲವೆಡೆ ಬೆಳಿಗ್ಗೆಯಿಂದಲೇ ಅಘೋಷಿತ ಹರತಾಳದ ವಾತಾವರಣ ನಿರ್ಮಾಣವಾಗಿದೆ.
ತನಿಖೆಗೆ ಕಾಸರಗೋಡು ಡಿವೈಎಸ್ ಪಿ ಎಂ.ವಿ ಸುಕುಮಾರನ್ ನೇತೃತ್ವದಲ್ಲಿ ಇಬ್ಬರು ಸರ್ಕಲ್ ಇನ್ಸ್ ಪೆಕ್ಟರ್ ಒಳಗೊಂಡ ತನಿಖಾ ತಂಡ ರಚನೆಯಾಗಿದ್ದು , ಘಟನೆಗೆ ಮದ್ಯ ಮಾರಾಟ ವಿರೋಧ ಕೃತ್ಯಕ್ಕೆ ಕಾರಣ ಇರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಸೂಕ್ಷ್ಮ ಸ್ಥಳದಲ್ಲಿ ಪೊಲೀಸರು ಮುನ್ನೆಚ್ಚರಿಕೆ ವಹಿಸಿದ್ದು ಹಂತಕರಿಗಾಗಿ ಪೊಲೀಸರು ಶೋಧ ನಡೆಸುತ್ತಿದ್ದು, ತನಿಖೆಯನ್ನು ಮಂಗಳೂರಿಗೆ ವಿಸ್ತರಿಸಲಾಗಿದೆ. ಆರ್ ಎಸ್ ಎಸ್ - ಬಿ ಜೆ ಪಿ ಕಾರ್ಯಕರ್ತರು ಕೃತ್ಯ ನಡೆಸಿರುವುದಾಗಿ ಸಿಪಿಎಂ ಆರೋಪಿಸಿದೆ .ಘಟನೆ ಹಿನ್ನಲೆಯಲ್ಲಿ ಉಪ್ಪಳ ಪರಿಸರದಲ್ಲಿ ಪೊಲೀಸರು ಬಂದೋಬಸ್ತ್ ಏರ್ಪಡಿಸಿದ್ದಾರೆ