ಕಾರ್ಕಳ, ಆ 06: ಸಾರ್ವಜನಿಕ ಸ್ಥಳದಲ್ಲಿ ಹಣವನ್ನು ಪಣವಾಗಿಟ್ಟು ಜೂಜಾಟ ಆಡುತ್ತಿದ್ದ ಬಗ್ಗೆ ಖಚಿತ ಮಾಹಿತಿ ಪಡೆದ ಪೊಲೀಸರು ದಾಳಿ ನಡೆಸಿ 7 ಜನರನ್ನು ವಶಕ್ಕೆ ಪಡೆದುಕೊಂಡ ಘಟನೆ ಕಾರ್ಕಳದ ಕಸಬಾ ಗ್ರಾಮದ ಕಟ್ಟೆಮಾರು ಎಂಬಲ್ಲಿ ನಡೆದಿದೆ.
ದಾಳಿ ವೇಳೆ ಜೂಜಾಟದಲ್ಲಿ ತೊಡಗಿದ್ದ ಗುರುವಾಯನಕೆರೆಯ ಉಸ್ಮಾನ್, ಕುಕ್ಕುಂದೂರಿನ ಪ್ರತಾಪ್, ನಿಟ್ಟೆ ನಿವಾಸಿ ರವಿ, ಮಿಯ್ಯರುವಿನ ಸಂದೀಪ್, ಸಿದ್ದಕಟ್ಟೆಯ ತೌಸಿಫ್, ಬೈಲೂರು ಸುಜಯ್ ಸಾಲಿಯಾನ್, ಕಾರ್ಕಳದ ನಿವಾಸಿ ಹರಿಯಪ್ಪ ಎಂಬವರನ್ನು ವಶಕ್ಕೆ ಪಡೆಯಲಾಗಿದ್ದು ಉಳಿದವರು ಪರಾರಿಯಾಗಿದ್ದಾರೆ. ಇನ್ನು ಕೃತ್ಯಕ್ಕೆ ಬಳಸಿದ 30,280ರೂ. ನಗದು, 12 ಬೈಕ್, ಒಂದು ಕಾರು , ಆಟ ಆಡಲು ಉಪಯೋಗಿಸಿದ ವಸ್ತು ಸೇರಿದಂತೆ 13 ಮೊಬೈಲ್ ಗಳನ್ನು ವಶಪಡಿಸಿಕೊಳ್ಳಲಾಗಿದೆ. ಅಲ್ಲದೆ ದಾಳಿ ವೇಳೆ ಪರಾರಿಯಾಗುತ್ತಿದ್ದ ಓರ್ವನನ್ನು ಬೆನ್ನಟ್ಟಿ ಹಿಡಿಯಲು ಹೋದ ಪೊಲೀಸ್ ಸಿಬ್ಬಂದಿಯೋರ್ವರ ಮೇಲೆ ಆರೋಪಿಗಳು ಹಲ್ಲೆಗೂ ಮುಂದಾಗಿದ್ದಾರೆ ಎನ್ನಲಾಗಿದೆ.