ಕಡಬ, ಆ 06: ಆರು ದಿನಗಳ ಹಿಂದಷ್ಟೇ ಜನನವಾಗಿದ್ದ ಮಗುವೊಂದು ಆಸ್ಪತ್ರೆಯಿಂದ ಮನೆಗೆ ಮರಳುತ್ತಿದ್ದ ಸಂದರ್ಭ ಸಾವನ್ನಪ್ಪಿದ ಘಟನೆ ಕಡಬದಲ್ಲಿ ನಡೆದಿದೆ. ಇಲ್ಲಿನ ಕುಟ್ರುಪ್ಪಾಡಿ ಗ್ರಾಮದ ಕಾಯರಡ್ಕ ನಿವಾಸಿ ಶೇಖರ ಎಂಬವರ ಪತ್ನಿ ವಸಂತಿ ಎರಡನೇ ಹೆರಿಗೆಗಾಗಿ ಜುಲೈ 30ರಂದು ಕಡಬದ ಸಮುದಾಯ ಆಸ್ಪತ್ರೆಗೆ ತೆರಳಿದಾಗ ಅಲ್ಲಿನ ವೈದ್ಯರು ಮಂಗಳೂರಿನ ಲೇಡಿಗೋಶನ್ ಆಸ್ಪತ್ರೆಗೆ ದಾಖಲಾಗುವಂತೆ ತಿಳಿಸಿದ್ದರು. ಅದೇ ದಿನ ರಾತ್ರಿ ಮಹಿಳೆ ಗಂಡು ಮಗುವಿಗೆ ಜನ್ಮ ನೀಡಿದ್ದು ಆರಂಭದಲ್ಲಿ ಆರೋಗ್ಯವಾಗಿದ್ದ ಮಗು ಬಳಿಕ ಎದೆಹಾಲು ಸೇವಿಸುತ್ತಿಲ್ಲ ಎಂದು ಪೋಷಕರು ವೈದ್ಯರಿಗೆ ತಿಳಿಸಿದ್ದರು.
ಆದರೆ ಆಗಸ್ಟ್ ೪ರಂದು ತಾಯಿ ಮತ್ತು ಮಗುವನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಿ ಮನೆಗೆ ಕರೆದುಕೊಂಡು ಹೋಗುವಂತೆ ವೈದ್ಯರು ತಿಳಿಸಿದ್ದು, ಅವರಿದ್ದ ಬೆಡ್ಗೆ ಬೇರೆ ರೋಗಿಯನ್ನು ದಾಖಲಿಸಿದ್ದರು. ಮಗು ಆರೋಗ್ಯವಾಗಿಲ್ಲ ಚಿಕಿತ್ಸೆ ನೀಡಿ ಕಳಿಸಿ ಎಂದು ಪೋಷಕರು ಮನವಿ ಮಾಡಿದರೂ ವೈದ್ಯರು ಮಾತ್ರ ನಿಮ್ಮ ಮಗು ಆರೋಗ್ಯವಾಗಿದ್ದು, ನೀವು ಇಲ್ಲಿಯೇ ಉಳಿದುಕೊಳ್ಳಲು ಈ ರೀತಿಯ ನಾಟಕವಾಡುತ್ತೀರಿ ಎಂದು ಬಲವಂತವಾಗಿ ಅವರನ್ನು ಅಂಬ್ಯುಲೆನ್ಸ್ ಮೂಲಕ ಕಡಬಕ್ಕೆ ಕಳುಹಿಸಿದ್ದಾರೆ. ಆದರೆ ಕಡಬ ತಲುಪಿದ ಕೆಲವೇ ಹೊತ್ತಿನಲ್ಲಿ ಮಗು ಮೃತಪಟ್ಟಿದ್ದು ವೈದ್ಯರ ಬೇಜವಾಬ್ದಾರಿಯಿಂದಾಗಿ ಮಗು ಸಾವನ್ನಪ್ಪಿದೆ ಎಂದು ಪೋಷಕರು ಆರೋಪಿಸಿದ್ದಾರೆ. ಅಲ್ಲದೆ ತಮಗೆ ನ್ಯಾಯ ಒದಗಿಸುವಂತೆ ಆಗ್ರಹಿಸಿದ್ದಾರೆ.