ಬಂಟ್ವಾಳ, ಅ 6: “ರಾಣಿ ಅಬ್ಬಕ್ಕ ನಾಡಿನ ಸಂಸ್ಕೃತಿ, ಪ್ರತೀಕ, ನಮ್ಮ ಹೆಮ್ಮೆ. ಅಬ್ಬಕ್ಕ ಚರಿತ್ರೆಯನ್ನು ಕಟ್ಟುವಾಗ ಆಕೆಗೆ ಅನ್ಯಾಯವಾಗಿದೆ. ತುಳು ಬದುಕನ್ನು ಜನರಿಗೆ ತಿಳಿಸುವುದರ ಜೊತೆಗೆ ಭಾರತದಲ್ಲಿ ಮ್ಯೂಸಿಯಂ ಸಂಸ್ಕೃತಿಯನ್ನು ಉದ್ದೀಪನಗೊಳಿಸಿದ್ದಾರೆ” ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವೆ ಜಯಮಾಲಾ ಹೇಳಿದರು. ಸೋಮವಾರ ಸಂಜೆ ಬಿ.ಸಿ.ರೋಡಿನ ಸಂಚಯಗಿರಿಯಲ್ಲಿರುವ ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರ ಹಾಗೂ ಅಲ್ಲಿರುವ ಆರ್ಟ್ ಗ್ಯಾಲರಿ, ಪ್ರಾಚೀನ ಬದುಕನ್ನು ತೆರೆದಿಡುವ ವಸ್ತು ಸಂಗ್ರಹಾಲಯವನ್ನು ಮಾಜಿ ಸಚಿವ ಬಿ.ರಮಾನಾಥ ರೈ ಜೊತೆ ವೀಕ್ಷಿಸಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.
ಅಬ್ಬಕ್ಕ ಅಧ್ಯಯನ ಕೇಂದ್ರದಲ್ಲಿದ್ದ ಆರ್ಟ್ ಗ್ಯಾಲರಿಯಲ್ಲಿ ರಾಣಿ ಅಬ್ಬಕ್ಕನ ಬದುಕಿನ ಕಥೆಯನ್ನು ಆಧರಿಸಿ ಬರೆದ ಚಿತ್ರಗಳನ್ನು ನೋಡಿದ ಜಯಮಾಲಾ ಕೆಲವು ಚಿತ್ರಗಳ ಫೋಟೋಗನ್ನು ತನ್ನ ಮೊಬೈಲ್ ನಲ್ಲಿ ಸೆರೆಹಿಡಿದರು. ಈ ಸಂದರ್ಭ ಮಾಜಿ ಸಚಿವ ಬಿ.ರಮಾನಾಥ ರೈ, ಕೇಂದ್ರದ ರೂವಾರಿಗಳಾದ ಪ್ರೊ.ತುಕಾರಾಮ ಪೂಜಾರಿ, ಪ್ರೊ. ಆಶಾಲತಾ ಸುವರ್ಣ ಗ್ಯಾಲರಿ ಕುರಿತು ವಿವರ ನೀಡಿದರು. ಜಿಲ್ಲಾ ಪಂಚಾಯತ್ ಸದಸ್ಯರಾದ ಬಿ.ಪದ್ಮಶೇಖರ ಜೈನ್, ಚಂದ್ರಪ್ರಕಾಶ ಶೆಟ್ಟಿ, ತಾಪಂ ಉಪಾಧ್ಯಕ್ಷ ಅಬ್ಬಾಸ್ ಆಲಿ ಮತ್ತಿತರರು ಉಪಸ್ಥಿತರಿದ್ದರು.