ಕಾಸರಗೋಡು, ಅ 6: ಉಪ್ಪಳ ಸೋಂಕಾಲಿನಲ್ಲಿ ಸಿಪಿಎಂ ಕಾರ್ಯಕರ್ತ ಅಬೂಬಕ್ಕರ್ ಸಿದ್ದಿಕ್ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇಬ್ಬರನ್ನು ಮಂಜೇಶ್ವರ ಪೊಲೀಸರು ವಶಕ್ಕೆ ಪಡೆದಿದ್ದು, ತನಿಖೆ ನಡೆಸುತ್ತಿದ್ದಾರೆ. ಬಿಜೆಪಿ ಕಾರ್ಯಕರ್ತರಾದ ಸೋಂಕಾಲ್ ಪ್ರತಾಪನಗರದ ಅಶ್ವಥ್ ಮತ್ತು ಕಾರ್ತಿಕ್ ಎಂಬವರನ್ನು ವಶಕ್ಕೆ ಪಡೆಯಲಾಗಿದೆ.
ಅಗಸ್ಟ್ 6ರ ಸೋಮವಾರ ಮಧ್ಯಾಹ್ನ ಸೋಂಕಾಲ್ ಸಮೀಪದಿಂದಲೇ ಪೊಲೀಸರು ಇಬ್ಬರನ್ನು ವಶಕ್ಕೆ ತೆಗೆದುಕೊಂಡಿರುವುದಾಗಿ ಮೂಲಗಳು ತಿಳಿಸಿವೆ. ಇಬ್ಬರನ್ನು ಗುಪ್ತ ಸ್ಥಳದಲ್ಲಿರಿಸಿ ತನಿಖಾ ತಂಡ ವಿಚಾರಣೆ ನಡೆಸುತ್ತಿದ್ದು, ಮಾಹಿತಿ ಕಲೆ ಹಾಕುತ್ತಿದ್ದಾರೆ. ಆದಿತ್ಯವಾರ ರಾತ್ರಿ 11 ಗಂಟೆ ಸುಮಾರಿಗೆ ಬೈಕ್ ನಲ್ಲಿ ಮನೆಗೆ ತೆರಳುತ್ತಿದ್ದ ಸಿದ್ದಿಕ್ ನನ್ನು ಅಶ್ವಥ್ ನೇತೃತ್ವದ ತಂಡವು ತಡೆದು ಕೊಲೆ ಮಾಡಿತ್ತು. ಕೃತ್ಯಕ್ಕೆ ಬಳಸಿದ್ದ ಚಾಕು ಸಮೀಪದ ಪೊದೆಯೊಂದರಲ್ಲಿ ಪೊಲೀಸರು ಪತ್ತೆ ಹಚ್ಚಿದ್ದು, ಅದನ್ನು ವಶಕ್ಕೆ ಪಡೆದುಕೊಂದಿದ್ದಾರೆ. ಇನ್ನು ಆರೋಪಿಗಳು ಕೃತ್ಯ ನಡೆಸಿದ ಸ್ಥಳದಲ್ಲೇ ಬೈಕ್ ಬಿಟ್ಟು ಪರಾರಿಯಾಗಿದ್ದು, ಇದನ್ನು ಕೂಡ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಈ ನಡುವೆ ಸಿದ್ದಿಕ್ ನ ಮೃತದೇಹವನ್ನು ಪರಿಯಾರಂ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ಬಳಿಕ ಉಪ್ಪಳಕ್ಕೆ ತರಲಾಗಿದ್ದು, ಕಾಲಿಕಡವು, ಕಾಞ೦ಗಾಡ್, ಕಾಸರಗೋಡು, ಕುಂಬಳೆ, ಉಪ್ಪಳ ಮೊದಲಾದೆಡೆಗಳಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಯಿತು. ಸಂಜೆ ಸೋಂಕಾಲ್ ನ ಮನೆಗೆ ತಂದು ಬಳಿಕ ಸೋಂಕಾಲ್ ಮಸೀದಿಯಲ್ಲಿ ದಫನ ಕಾರ್ಯ ನಡೆಸಲಾಯಿತು.
ಇನ್ನು ಅಹಿತಕರ ಘಟನೆ ನಡೆಯುವ ಸಾಧ್ಯತೆ ಇರುವುದಾಗಿ ಗುಪ್ತಚರ ವರದಿ ಹಿನ್ನಲೆಯಲ್ಲಿ ಸೂಕ್ಷ್ಮ ಪ್ರದೇಶದಲ್ಲಿ ಪೊಲೀಸರು ಕಟ್ಟೆಚ್ಚರ ವಹಿಸಿದ್ದಾರೆ.