ಕಾಸರಗೋಡು ಆ 7: ಕೇಂದ್ರ ಸರಕಾರದ ಮೋಟಾರು ವಾಹನ ನಿಯಮ ತಿದ್ದುಪಡಿ ಯನ್ನು ವಿರೋಧಿಸಿ ಮೋಟಾರು ಉದ್ಯಮ ಸಂರಕ್ಷಣಾ ಸಮಿತಿ ಇಂದು ರಾಷ್ಟೀಯ ವಾಹನ ಬಂದ್ ಗೆ ಕರೆ ನೀಡಿದ್ದು, ಕೇರಳದಲ್ಲಿ ಖಾಸಗಿ , ಕೆ ಎಸ್ ಆರ್ ಟಿ . ಸಿ ಸೇರಿದಂತೆ ಬಸ್ಸು ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ.
ಲಾರಿ, ಆಟೋ - ಟ್ಯಾಕ್ಸಿ ಮಾಲಕರು ಮುಷ್ಕರದಲ್ಲಿ ಪಾಲ್ಗೊಳ್ಳಲಿದ್ದು, ಇದರಿಂದ ದೈನಂದಿನ ಚಟುವಟಿಕೆ ಸ್ಥಬ್ಧಗೊಳ್ಳಲಿದೆ. 24 ಗಂಟೆಗಳ ಮುಷ್ಕರ ಮಧ್ಯರಾತ್ರಿಯಿಂದ ಆರಂಭಗೊಂಡಿದೆ, ಬಿಜೆಪಿಯ ಕಾರ್ಮಿಕ ಸಂಘಟನೆಯಾದ ಬಿ ಎಂ ಎಸ್ ಹೊರತುಪಡಿಸಿ ಉಳಿದ ಎಲ್ಲಾ ಕಾರ್ಮಿಕ ಸಂಘಟನೆಗಳು ಮುಷ್ಕರಕ್ಕೆ ಬೆಂಬಲ ಸೂಚಿಸಿವೆ. ಕೇಂದ್ರ ಸರಕಾರ ಮೋಟಾರು ಕಾಯ್ದೆಯಲ್ಲಿನ ತಿದ್ದುಪಡಿ ಹಿಂತೆಗೆದುಕೊಳ್ಳಬೇಕು, ಇನ್ಸೂರೆನ್ಸ್ ಪ್ರೀಮಿಯಂ ಹೆಚ್ಚಳ ಹಿಂದಕ್ಕೆ ಪಡೆಯಬೇಕು, ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ಏರಿಕೆಗೆ ಕಡಿವಾಣ ಹಾಕಬೇಕು ಮೊದಲಾದ ಹಲವು ಬೇಡಿಕೆಗಳನ್ನು ಮುಂದಿಟ್ಟುಕೊಂಡು ಮುಷ್ಕರಕ್ಕೆ ಕರೆ ನೀಡಲಾಗಿದೆ. ಇನ್ನು ಮಂಗಳೂರಿನಲ್ಲಿ ಸಾರಿಗೆ ಸಂಚಾರ ಯಥಾ ಸ್ಥಿತಿಯಲ್ಲಿದ್ದು ಬಂದ್ ಗೆ ಯಾವುದೇ ಬೆಂಬಲ ವ್ಯಕ್ತವಾಗಿಲ್ಲ.