ಚಿಕ್ಕಮಗಳೂರು, ಆ 07: ಜಿಲ್ಲೆಯ ಮಲ್ಲೇಗೌಡ ಸರಕಾರಿ ಜಿಲ್ಲಾಸ್ಪತ್ರೆ ಹಾಗೂ ಸರಕಾರಿ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಗೆ ದಿಢೀರ್ ಭೇಟಿ ನೀಡಿದ ಶಾಸಕ ಸಿ.ಟಿ.ರವಿ ವಿವಿಧ ಅಧಿಕಾರಿಗಳು ಹಾಗೂ ಆಯುಕ್ತೆ ತುಷಾರ ಮಣಿ ಅವರ ತಂಡ ಅಲ್ಲಿನ ಅವ್ಯವಸ್ಥೆ ಸಮಸ್ಯೆ ಹಾಗೂ ಕುಂದು ಕೊರತೆಗಳ ಬಗ್ಗೆ ರೋಗಿಗಳು ವೈದ್ಯರು ಮತ್ತು ಸಿಬ್ಬಂದಿಯಿಂದ ಮಾಹಿತಿ ಪಡೆದುಕೊಂಡರು. ಚಿಕ್ಕಮಗಳೂರು ಜಿಲ್ಲಾಸ್ಪತ್ರೆಗೆ ಸಂಬಂಧಿಸಿದಂತೆ ದೂರುದುಮ್ಮಾನಕ್ಕೆ ಸ್ಪಂದಿಸಲು ಹೋಗಿದ್ದ ಅವರಿಗೆ ಆಸ್ಪತ್ರೆಯಲ್ಲಿ ನರಕದರ್ಶನವಾಯಿತು. ಒಳ ರೋಗಿಗಳ ವಿಭಾಗದ ಮೊದಲ ಮಹಡಿಯ ಚಿಕಿತ್ಸಾ ಕೊಠಡಿಗಳಲ್ಲಿ ಕೆಟ್ಟ ವಾಸನೆ ಬರುತ್ತಿತ್ತು. ಸಿಡಿಮಿಡಿಗೊಂಡ ಶಾಸಕ ಸಿ.ಟಿ.ರವಿ, ಇಂಥ ಕೆಟ್ಟ ವಾಸನೆಯಲ್ಲಿ ರೋಗಿಗಳು ಇರುವುದಾದರೂ ಹೇಗೆಂದು ಪ್ರಶ್ನಿಸಿದರು. ಕೂಡಲೆ ದುರ್ವಾಸನೆ ನಿಯಂತ್ರಿಸುವಂತೆ ವೈದ್ಯಾಧಿಕಾರಿಗೆ ಸೂಚಿಸಿದರು.
ಇದೇ ವೇಳೆ ಆಸ್ಪತ್ರೆ ಆವರಣದಲ್ಲಿ ಸ್ವಚ್ಛತೆ ಇಲ್ಲದಿರುವುದು, ಕುಡಿಯುವ ನೀರಿನ ಸಮಸ್ಯೆಯನ್ನು ಕಂಡ ಶಾಸಕ ರವಿ, ಆಸ್ಪತ್ರೆಗೆ ಸಮರ್ಪಕ ನೀರಿನ ಸೌಲಭ್ಯ ನೀಡುವಂತೆ ನಗರಸಭೆ ಆಯುಕ್ತೆ ತುಷಾರಮಣಿ ಮತ್ತು ಆಸ್ಪತ್ರೆಯಲ್ಲಿ ಶುಚಿತ್ವ ಕಾಪಾಡುವಂತೆ ಜಿಲ್ಲಾ ಸರ್ಜನ್ ದೊಡ್ಡಮಲ್ಲಪ್ಪರವರಿಗೆ ಸೂಚನೆ ನೀಡಿದರು.
ಇನ್ನು ಅಲ್ಲಿ ಬರುತ್ತಿದ್ದ ಗಬ್ಬು ವಾಸನೆಗೆ ಆಯುಕ್ತೆ ತುಷಾರಮಣಿ ಸೇರಿ ಹಲವರು ವಾಕರಿಕೆಯಿಂದ ಬಳಲಿದರು. ಆಸ್ಪತ್ರೆಯಿಂದ ಹೊರಬಂದರೂ ಆಯುಕ್ತೆ ತುಷಾರಮಣಿಗೆ ಮಾತ್ರ ವಾಕರಿಕೆ ನಿಂತಿರಲಿಲ್ಲ. ಆಸ್ಪತ್ರೆಗೆ ಭೇಟಿ ನೀಡಿ ಆಯುಕ್ತರು , ಹಾಗೂ ವಿವಿಧ ಅಧಿಕಾರಿಗಳು ಆಸ್ಪತ್ರೆಯ ಕೆಲವೇ ಗಂಟೆಗಳ ಭೇಟಿಗೆ ಸುಸ್ತಾದರು.