ಕುಂದಾಪುರ,ಆ 08: ದಾರಿಹೋಕ ಯುವತಿಯರೊಂದಿಗೆ , ಬಟ್ಟೆ ಬಿಚ್ಚಿ ಅಶ್ಲೀಲವಾಗಿ ವರ್ತಿಸುತ್ತಿದ್ದ ಆರೋಪದ ಮೇಲೆ ಯುವಕನನ್ನು ಹಿಡಿದು ಕಟ್ಟಿ ಹಾಕಿ ಧರ್ಮದೇಟು (ಹಲ್ಲೆ) ನಡೆಸಿದ ಘಟನೆ ಕುಂದಾಪುರ ಪುರಸಭಾ ವ್ಯಾಪ್ತಿಯ ಎಲ್ಐಸಿ ರಸ್ತೆಯಲ್ಲಿ ಆ 7 ರ ಮಂಗಳವಾರ ಸಂಜೆ ನಡೆದಿದೆ. ಅಲ್ಲಿಯ ಸ್ಥಳೀಯ ನಿವಾಸಿ ಕುಂದಾಪುರದ ಖ್ಯಾತ ಮಾಂಸಾಹಾರಿ ಹೋಟೆಲೊಂದರ ಮಾಲೀಕರ ಪುತ್ರನೇ ಈ ಕೃತ್ಯ ನಡೆಸಿದ ಆರೋಪಿ.
ಆರೋಪಿ ಯುವಕ ಕಳೆದ ಕೆಲವು ಸಮಯಗಳಿಂದ ಕುಂದಾಪುರದ ವಿವಿಧ ರಸ್ತೆಗಳಲ್ಲಿ ಹೆಣ್ಣು ಮಕ್ಕಳು ನಡೆದು ಹೋಗುತ್ತಿದ್ದಾಗ ಪ್ಯಾಂಟ್ ಬಿಚ್ಚಿ ಅಶ್ಲೀಲವಾಗಿ ವರ್ತಿಸುತ್ತಿದ್ದ ಎನ್ನಲಾಗಿದೆ. ಆಗಸ್ಟ್ 6 ರ ಸೋಮವಾರವೂ ಆರೋಪಿ ಇದೇ ರೀತಿ ಮಾಡಿದ್ದು, ಕೆಲವು ಯುವತಿಯರು ಮನೆಯಲ್ಲಿ ಹೋಗಿ ವಿಷಯ ತಿಳಿಸಿದ್ದರು ಎನ್ನಲಾಗಿದೆ. ಇದರಿಂದ ಮಂಗಳವಾರ ಸ್ಥಳೀಯರು ಒಟ್ಟು ಸೇರಿ ಆರೋಪಿಯನ್ನು ಹಿಡಿದು ಕಟ್ಟಿ ಹಾಕಿ ಹೊಡೆದಿದ್ದಾರೆ ಎನ್ನಲಾಗಿದೆ.
ಸಂಜೆ ಸುಮಾರಿಗೆ ರೈನ್ ಕೋಟ್ ಧರಿಸಿ ದ್ವಿಚಕ್ರ ವಾಹನದಲ್ಲಿ ಬಂದಿದ್ದ ಆರೋಪಿ ಯುವಕನನ್ನು ಸ್ಥಳೀಯ ಮಹಿಳೆಯರು ಹಿಡಿದುಕೊಂಡಿದ್ದು, ಪ್ಲಾಸ್ಟಿಕ್ ವಯರಿನಲ್ಲಿ ವಿದ್ಯುತ್ ಕಂಬಕ್ಕೆ ಕಟ್ಟಿ ಹಾಕಿ ಹೊಡೆದಿದ್ದಾರೆ. ನಂತರ ವಿಷಯ ತಿಳಿದ ಕುಂದಾಪುರ ಪೊಲೀಸರು ಸ್ಥಳಕ್ಕಾಗಮಿಸಿ ಯುವಕನನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಬಳಿಕ ಆರೋಪಿ ಮನೆಯವರು ಸುದ್ಧಿ ತಿಳಿದು ಠಾಣೆಗೆ ಬಂದಿದ್ದು, ಆರೋಪಿ ಯುವಕ ಮಾನಸಿಕ ಅಸ್ವಸ್ಥ ಎಂದು ಹೇಳಿಕೆ ನೀಡಿದ್ದಾರೆ. ಅಲ್ಲದೇ ಆತನಿಗೆ ವಿವಾಹವಾಗಿದ್ದು ಮಕ್ಕಳಿದ್ದಾರೆ ಎಂದು ತಿಳಿದು ಬಂದಿದೆ.
ಅನೈತಿಕ ಪೊಲೀಸ್ಗಿರಿ : ಆರೋಪಿ ನಡೆಸಿರುವ ಕೃತ್ಯ ಅಪರಾಧವಾಗಿದ್ದರೂ ಪೊಲೀಸರಿಗೆ ಮಾಹಿತಿ ನೀಡದೇ ನೈತಿಕ ಪೊಲೀಸ್ಗಿರಿ ನಡೆಸಿರುವುದು ಎಷ್ಟು ಸರಿ ಎನ್ನುವ ಅಭಿಪ್ರಾಯಗಳು ಈಗ ಕುಂದಾಪುರದ ಆಸುಪಾಸಿನಲ್ಲಿ ಕೇಳಿಬರುತ್ತಿದೆ.