ಕಾರ್ಕಳ, ಆ 8: ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಮುಂಡ್ಕೂರು ಎಂಬಲ್ಲಿ ಮೂರು ಮನೆಗಳಿಗೆ ನುಗ್ಗಿ ಕಳವುಗೈದ ಪ್ರಕರಣಕ್ಕೆ ಸಂಬಂಧಿಸಿ ಓರ್ವನನ್ನು ಕಾರ್ಕಳ ಪೊಲೀಸರು ಆ.5ರಂದು ರಾತ್ರಿ 8.30ಕ್ಕೆ ಮುಂಡ್ಕೂರು ಗ್ರಾಮದ ಇನ್ನಾ ಕ್ರಾಸ್ ಬಸ್ ನಿಲ್ದಾಣದ ಬಳಿ ಬಂಧಿಸಿ, ಸೊತ್ತುಗಳನ್ನು ವಶಪಡಿಸಿಕೊಂಡಿದ್ದರು.
ಬಂಧಿತನನ್ನು ಮುಂಡ್ಕೂರು ನಿವಾಸಿ ಶೈಲೇಶ್ ಶೆಟ್ಟಿ ಎಂದು ಗುರುತಿಸಲಾಗಿತ್ತು. ಈತ 2017ರಲ್ಲಿ ಮುಂಡ್ಕೂರು ಗ್ರಾಮದ ಜಯ ಎನ್.ಶೆಟ್ಟಿ, ಜ್ಯೋತಿ ಎನ್. ಶೆಟ್ಟಿ ಹಾಗೂ 2018ರಲ್ಲಿ ಮುಂಡ್ಕೂರು ಗ್ರಾಮದ ರಮೇಶ್ ಶೆಟ್ಟಿ ಎಂಬವರ ಮನೆಗೆ ನುಗ್ಗಿ ಚಿನ್ನಾಭರಣಗಳನ್ನು ಕಳವು ಮಾಡಿದ್ದನು. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆದರೆ ಈತನ ಕಳ್ಳನಾಗಿದ್ದು ಹೇಗೆ ಎನ್ನುವ ಕಥೆಯೇ ಬೆಚ್ಚಿ ಬೀಳುವಂತದ್ದು.
ಕಳ್ಳತನ ಆರೋಪ ಹೊತ್ತ ಶೈಲೇಶ್ ಶೆಟ್ಟಿ, ಮುಂಡ್ಕೂರು ಗ್ರಾಮದಲ್ಲಿ ಓರ್ವ ಪ್ರಗತಿಪರ ಕೃಷಿಕನಾಗಿದ್ದು, ಪರಿಸರದಲ್ಲಿ ಪ್ರಾಮಾಣಿಕಯೂ ಜನಪ್ರಿಯನಾಗಿದ್ದ. ಆದರೆ ಇದೀಗ ಆತ ವೃತಿಪರ ಕಳ್ಳನಾಗಿದ್ದು ಗ್ರಾಮಸ್ಥರನ್ನು ಬೆಚ್ಚಿಬೀಳಿಸಿದೆ. ತಂದೆಗೆ ಭೂ ಮಸೂದೆಯಲ್ಲಿ ಬಂದ 5 ಎಕರೆ ಜಮೀನುನನ್ನು ಭಾರೀ ಪರಿಶ್ರಮ ಪಟ್ಟು, ಕೃಷಿ ಮಾಡಿ ಶ್ರಮಜೀವಿಯೆನಿಸಿದ್ದ, ಇಂತಹ ವ್ಯಕ್ತಿ ಕಳ್ಳತನಕ್ಕೆ ಯಾಕೆ ಇಳಿದ ಎನ್ನುವುದು ಸ್ಥಳೀಯರಲ್ಲಿ ಕುತೂಹಲ ಮೂಡಿಸಿದೆ. ಯಕ್ಷಗಾನ ನಾಟಕಗಳ ಅಪ್ಪಟ ಅಭಿಮಾನಿಯಾಗಿದ್ದ ಈತ ದೇಗುಲದ ವರ್ಷಾವಧಿ ಜಾತ್ರೆಯ ಸಂದರ್ಭ ಪ್ರಸಿದ್ಧ ತಂಡಗಳಿಂದ ನಾಟಕ ಸಂಘಟಿಸುವಲ್ಲಿ ಆತ ಮುಂಚೂಣಿಯಲ್ಲಿರುತ್ತಿದ್ದ. ಈ ಎಲ್ಲಾ ಸಾಮಾಜಿಕ ಚಟುವಟಿಕೆಗಳಲ್ಲಿ ಕ್ರಿಯಾ ಶೀಲನಾಗಿದ್ದ ಶೈಲೇಶನ ಬಗ್ಗೆ ಜನರಿಗೆ ಒಳ್ಳೆಯ ಒಲವಿದ್ದರೂ ಆತ ಈ ರೀತಿ ವೃತ್ತಿಪರ ಕಳ್ಳನಾಗುತ್ತಾನೆ ಎಂಬುವುದು ಯಾರು ನಂಬಲೂ ಸಾಧ್ಯವಾಗುತ್ತಿಲ್ಲ. ಕ್ರಿಕೆಟ್ ಬೆಟ್ಟಿಂಗ್ ಚಾಳಿಯಿದ್ದ ಈತ ನಷ್ಟ ಭರಿಸಲಾಗದೆ ಕಳ್ಳತನಕ್ಕೆ ಇಳಿದಿದ್ದ ಎನ್ನುವುದು ಈಗ ಆತನ ನೆರೆಕರೆಯವರು ಆಡಿಕೊಳ್ಳುತ್ತಿದ್ದಾರೆ ಎನ್ನುವುದು ಪೊಲೀಸ್ ಮೂಲದ ಮಾಹಿತಿ.