ಕಡಬ, ಮಾ. 05 (DaijiworldNews/SM): ಕಡಬ ಆಟವಾಡುತ್ತಿದ್ದ ಸಂದರ್ಭದಲ್ಲಿ ಮರದಲ್ಲಿದ್ದ ಉಯ್ಯಾಲೆ ಕುತ್ತಿಗೆಗೆ ಸಿಲುಕಿ ಬಿಗಿದುಕೊಂಡ ಪರಿಣಾಮ ಬಾಲಕಿಯೊಬ್ಬಳು ಮೃತಪಟ್ಟಿರುವ ದಾರುಣ ಘಟನೆ ಮಾರ್ಚ್ 05ರ ಶುಕ್ರವಾರದಂದು ಸುಬ್ರಹ್ಮಣ್ಯ ಸಮೀಪದ ಏನೆಕಲ್ಲು ಎಂಬಲ್ಲಿ ನಡೆದಿದೆ.

ಏನೆಕಲ್ಲು ಗ್ರಾಮದ ಮುತ್ಲಾಜಡ್ಕ ನಿವಾಸಿಗಳಾದ ಬಾಬು ಅಜಿಲ ಅವರ ಪುತ್ರಿ ಶೃತಿ ಎಂಬಾಕೆಯೇ ಮೃತ ಬಾಲಕಿಯಾಗಿದ್ದಾಳೆ. ವಿಪರ್ಯಾಸವೆಂದರೆ, ಹುಟ್ಟುಹಬ್ಬದ ದಿನವೇ ಬಾಲಕಿಗೆ ಸಾವು ಬಂದೆರಗಿದೆ.
ಹುಟ್ಟು ಹಬ್ಬದ ಹಿನ್ನೆಲೆಯಲ್ಲಿ ಬಾಲಕಿ ಮಾ.5ರಂದು ಶಾಲೆಗೆ ರಜೆ ಮಾಡಿ ಮನೆಯಲ್ಲಿದ್ದಳು. ಅಲ್ಲದೆ, ಮನೆ ಸಮೀಪದಲ್ಲಿರುವ ಪೇರಳೆ ಮರಕ್ಕೆ ಉಯ್ಯಾಲೆ ಕಟ್ಟಿ ಆಟವಾಡುತ್ತಿದ್ದಳು. ಉಯ್ಯಾಲೆಯಾಡುತ್ತಿದ್ದಾಗ ಈ ಅವಘಡ ಸಂಭವಿಸಿದೆ.
ಸುಬ್ರಹ್ಮಣ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.