ಹೆಬ್ರಿ, ಆ 08: ಇತ್ತೀಚೆಗಷ್ಟೇ ಹೆಬ್ರಿ ಹಿರಿಯಡ್ಕದ ಪಡ್ಡಂ ದೈವಸ್ಥಾನದಲ್ಲಿದ್ದ ಕೊರಗಜ್ಜನ ದೈವ ವಿಗ್ರಹ ಕಳವಾಗಿತ್ತು. ಆದರೆ ಕಳ್ಳತನ ನಡೆದು 10 ದಿನವೂ ಕಳೆದಿಲ್ಲ, ಮತ್ತೆ ಅಲ್ಲಿ ಕೊರಗಜ್ಜನ ವಿಗ್ರಹ ಪ್ರತ್ಯಕ್ಷವಾಗಿ ಎಲ್ಲರಿಗೂ ಅಚ್ಚರಿಗೆ ಕಾರಣವಾಗಿದೆ.
ಜು. 30 ರಂದು ಹಿರಿಯಡ್ಕದ ಪಡ್ಡಂ ಕಾರ್ನಿಕದ ಬಬ್ಬು ದೈವಸ್ಥಾನವನ್ನು ಹೊಕ್ಕ ಕಳ್ಳರು, ದೈವದ ಪ್ರಮುಖ ವಿಗ್ರಹವನ್ನು ಕದಿಯಲು ಆಗದೆ ಕೊನೆಗೆ ಹೊರಗೆ ಇರುವ ಕೊರಗಜ್ಜ ದೈವದ ಪಂಚಲೋಹದ ವಿಗ್ರಹವನ್ನು ಹಾಗೂ ಗಂಟೆ ಮಣಿಯನ್ನು ಕಳ್ಳತನ ಮಾಡಿದ್ದರು.
ಇನ್ನು ದೈವಸ್ಥಾನದಲ್ಲಿರುವ ದೈವದ ಕಾಣಿಕೆ ಡಬ್ಬಿಯಲ್ಲಿದ್ದ ಹಣವನ್ನು ಹಿಂದಿನ ದಿನವಷ್ಟೇ ತೆಗೆದಿದ್ದ ಕಾರಣ ಕಳ್ಳರು ಕಾಣಿಕೆ ಡಬ್ಬಿ ಒಡೆದರೂ ಅವರಿಗೆ ಅಲ್ಲಿಯೂ ಎನೂ ಸಿಕ್ಕಿರಲಿಲ್ಲ. ಕಳ್ಳತನವಾದ ಬಗ್ಗೆ ದೈವಸ್ಥಾನ ಆಡಳಿತ ಮಂಡಳಿ ಹಾಗೂ ಊರಿನವರು ಹುಡುಕಾಡಿ ಸುತ್ತಮುತ್ತ ಹುಡುಕಿದರೂ ಯಾವುದೇ ಸುಳಿವು ಸಿಕ್ಕಿರಲಿಲ್ಲ. ಬಳಿಕ ಊರಿನವರು ಎಲ್ಲರೂ ಒಟ್ಟಾಗಿ ಸೇರಿ ಕೊರಗಜ್ಜ ದೈವಕ್ಕೆ ಪ್ರಾರ್ಥನೆ ಸಲ್ಲಿಸಿದ್ದರು. ಆದರೆ ಪ್ರಾರ್ಥನೆ ಸಲ್ಲಿಸಿದ ಮರುದಿನವೇ ದೈವಸ್ಥಾನದ ಎಡಭಾಗದಲ್ಲಿ ಕದ್ದ ಸೊತ್ತುಗಳಾದ ಗಂಟೆಮಣಿ ಹಾಗೂ ಕೊರಗಜ್ಜ ದೈವದ ಪಂಚಲೋಹ ವಿಗ್ರಹ ಪತ್ತೆಯಾಗಿದ್ದು ಎಲ್ಲರನ್ನು ಅಚ್ಚರಿಗೀಡು ಮಾಡಿದೆ.