ಮಂಗಳೂರು, ಮಾ 06 (DaijiworldNews/MS): ಭಾರತೀಯ ಕೋಸ್ಟ್ ಗಾರ್ಡ್ ತರಭೇತಿ ಕೇಂದ್ರಕ್ಕೆ ದಾರಿ ಮಾಡಿಕೊಡುವ ಉದ್ದೇಶದಿಂದ ಕೆಂಜಾರಿನಲ್ಲಿನ ಅತಿಕ್ರಮಣ ಮಾಡಲಾಗಿದೆ ಎಂದು ಆರೋಪಿಸಿ ತೆರವು ಮಾಡುವ ನೆಪದಲ್ಲಿ ನಕಲಿ ಗೋ ಪ್ರೇಮಿಗಳಾದ ಬಿಜೆಪಿಯವರು ಗೋವುಗಳನ್ನು ಬೀದಿಪಾಲು ಮಾಡಿದ್ದಾರೆ ಎಂದು ಮಾಜಿ ಮೇಯರ್ ಕವಿತಾ ಸನಿಲ್ ಆರೋಪಿಸಿದ್ದಾರೆ.


ದ.ಕ. ಜಿಲ್ಲಾ ಕಾಂಗ್ರೆಸ್ ಕಚೇರಿಲ್ಲಿ ಮಾ.6 ರ ಶನಿವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಹಿಂದೂಗಳು ಜಾನುವಾರುಗಳನ್ನು ದೇವರಂತೆ ಪೂಜಿಸುತ್ತಾರೆ . ಹಸುವಿನಲ್ಲಿ ಮುಕ್ಕೋಟಿ ದೇವರುಗಳು ವಾಸವಾಗಿದ್ದಾರೆಂದು ನಂಬುತ್ತಾರೆ. ಆದರೆ ಕೆಂಜಾರು ಆಶ್ರಮದಲ್ಲಿದ್ದ ದನಕರುಗಳು ಇಂದು ಬೀದಿಪಾಲಾಗಿದ್ದರೂ ಚುನಾವಣೆ ಸಂದರ್ಭದಲ್ಲಿ ಗೋವುಗಳ ಹೆಸರಿನಲ್ಲಿ ರಾಜಕೀಯ ಮಾಡುವ ಬಿಜೆಪಿಯ ಸಂಸದ, ಶಾಸಕರು ಮೌನವಾಗಿದ್ದು, ಆ ಮೂಕ ಪ್ರಾಣಿಗಳ ರೋದನ ಕೇಳುವವರಿಲ್ಲ ಎಂದು ಆರೋಪಿಸಿದರು.
ಮೂಕ ಪ್ರಾಣಿಗಳನ್ನು ಬೀದಿಗೆ ಹಾಕುವವರು ನಕಲಿ ಗೋಪ್ರೇಮಿಗಳು. ಒಂದು ವೇಳೆ ಕಾಂಗ್ರೆಸ್ ಆಡಳಿತದಲ್ಲಿದ್ದು, ಈ ರೀತಿ ಮಾಡಿದ್ದರೆ ಈಗಾಗಲೇ ಜಿಲ್ಲೆ ಹೊತ್ತಿ ಉರಿಯುವಂತೆ ಈ ನಕಲಿ ಗೋಪ್ರೇಮಿಗಳು ಮಾಡುತ್ತಿದ್ದರು ಎಂದು ತೀಕ್ಷ್ಣವಾಗಿ ನುಡಿದರು.
ದನಕರುಗಳ ಹೆಸರಿನಲ್ಲಿ ಮತ ಚಲಾಯಿಸುವ ಸಂಸದ ಶಾಸಕರು ಈಗ ಮೌನವಾಗಿದ್ದಾರೆ. ಮುಗ್ಧ ಪ್ರಾಣಿಗಳಿಗೆ ಆಶ್ರಯ ನೀಡಲು ಯಾರೂ ಮುಂದೆ ಬರುತ್ತಿಲ್ಲ. .
ಕೋಸ್ಟ್ ಗಾರ್ಡ್ ತರಬೇತಿ ಕೇಂದ್ರಕ್ಕೆ ನಾವು ಆಕ್ಷೇಪ ವ್ಯಕ್ತಪಡಿಸುತ್ತಿಲ್ಲ. ಸರ್ಕಾರಿ ಭೂಮಿಯನ್ನು ಅತಿಕ್ರಮಣ ಮಾಡಿದರೆ ತಪ್ಪಿತಸ್ಥರ ವಿರುದ್ಧ ಕ್ರಮ ತೆಗೆದುಕೊಳ್ಳಿ. ಜಾನುವಾರುಗಳನ್ನು ಬೇರೆ ಯಾವುದೇ ಗೋಶಾಲೆಗೆ ಸ್ಥಳಾಂತರಿಸಿ ಅಥವಾ ಪರ್ಯಾಯ ವ್ಯವಸ್ಥೆ ಕಲ್ಪಿಸಿ ನಂತರ ಜಿಲ್ಲಾಡಳಿತವು ಕಟ್ಟಡ ನೆಲಸಮ ಮಾಡಬೇಕಾಗಿತ್ತು.
ಹಿರಿಯರಾದ ಪ್ರಭಾಕರ ಭಟ್ ಅವರು ಕೆಂಜಾರಿನ ಈ ವಿಚಾರವಾಗಿ, ಅಲ್ಲಿ ಗೋಶಾಲೆಯೇ ಇರಲಿಲ್ಲ. ಅದು ದನಗಳ ಹಟ್ಟಿ ಎಂದು ಹೇಳಿರುವ ಆಡಿಯೋ ಕೇಳಿ ನೋವಾಯಿತು. ಹಿಂದುತ್ವ, ಗೋವುಗಳ ಬಗ್ಗೆ ಮಾತನಾಡುವವರೇ ಇಂತಹ ಮಾತುಗಳನ್ನು ಹೇಳುತ್ತಾರೆಂದರೆ ಏನರ್ಥ ಎಂದವರು ಪ್ರಶ್ನಿಸಿದರು
ಮುಖಂಡರಾದ ಸದಾಶಿವ ಉಳ್ಳಾಲ್, ಸಂತೋಷ್ ಶೆಟ್ಟಿ, ಪ್ರಕಾಶ್ ಸಾಲ್ಯಾನ್, ದೀಪಕ್ ಪೂಜಾರಿ, ನೀರಜ್ ಪಾಲ್, ಪುರುಷೋತ್ತಮ ಚಿತ್ರಾಪುರ, ರಜನೀಶ್ ಉಪಸ್ಥಿತರಿದ್ದರು