ಕಾಸರಗೋಡು, ಆ 08: ಕಾರಡ್ಕದ ಬಳಿಕ ಕಾಸರಗೋಡಿನ ಎಣ್ಮಕಜೆ ಗ್ರಾಮ ಪಂಚಾಯತ್ ಆಡಳಿತ ಸಮಿತಿ ವಿರುದ್ಧ ಕಾಂಗ್ರೆಸ್ ನೇತೃತ್ವದ ಯು ಡಿ ಎಫ್ ಮಂಡಿಸಿದ್ದ ಅವಿಶ್ವಾಸ ಗೊತ್ತುವಳಿಗೆ ಗೆಲುವು ಲಭಿಸಿದ್ದು , ಇದರಿಂದ ಬಿಜೆಪಿಗೆ ಮತ್ತೊಂದೆಡೆ ತನ್ನ ಅಧಿಕಾರ ಕಳೆದುಕೊಂಡಿದೆ.
ಯು ಡಿ ಎಫ್ ಮಂಡಿಸಿದ ಅವಿಶ್ವಾಸ ಗೊತ್ತುವಳಿಗೆ ಸಿಪಿಎಂ ಮತ್ತು ಸಿಪಿಐ ಬೆಂಬಲ ನೀಡಿದ್ದು , ಇದರಿಂದ 10-7 ಅಂತರದಿಂದ ಗೊತ್ತುವಳಿ ಮಂಜೂರುಗೊಂಡಿದೆ. 2015ರಲ್ಲಿ ನಡೆದ ಚುನಾವಣೆಯಲ್ಲಿ 17 ಸ್ಥಾನಗಳ ಪೈಕಿ ಬಿ ಜೆಪಿ ಮತ್ತು ಕಾಂಗ್ರೆಸ್ ತಲಾ ಏಳು ಸ್ಥಾನ ಗಳಿಸಿತ್ತು. ಸಿಪಿಎಂ ಎರಡು ಮತ್ತು ಸಿಪಿ ಐ ಒಂದು ಸ್ಥಾನ ಪಡೆದಿತ್ತು. ಯಾರಿಗೂ ಸ್ಪಷ್ಟ ಬಹುಮತ ಲಭಿಸದ ಹಿನ್ನಲೆಯಲ್ಲಿ ಚೀಟಿ ಎತ್ತುವ ಮೂಲಕ ಆಯ್ಕೆ ನಡೆದು ಬಿಜೆಪಿಗೆ ಅದೃಷ್ಟ ಒಲಿದಿತ್ತು. ಪಂಚಾಯತ್ ಅಧ್ಯಕ್ಷೆ ರೂಪವಾಣಿ ಆರ್.ಭಟ್ ವಿರುದ್ಧ ಕಾಂಗ್ರೆಸ್ ನ ವೈ.ಶಾರದಾ ಮತ್ತು ಉಪಾಧ್ಯಕ್ಷ ಕೆ.ಪುಟ್ಟಪ್ಪ ವಿರುದ್ಧ ಮುಸ್ಲಿಂ ಲೀಗ್ ನ ಸಿದ್ದಿಕ್ ಒಳಮೊಗರು ಅವಿಶ್ವಾಸ ಗೊತ್ತುವಳಿ ನೋಟಿಸ್ ನೀಡಿದ್ದರು. ಉಪಾಧ್ಯಕ್ಷರ ವಿರುದ್ಧ ಆಗಸ್ಟ್ 9ರಂದು ಅವಿಶ್ವಾಸ ಗೊತ್ತುವಳಿ ಮಂಡನೆಯಾಗಲಿದೆ. ಕಳೆದ ವಾರ ಕಾರಡ್ಕ ಗ್ರಾಮ ಪಂಚಾಯತ್ ನಲ್ಲಿ ಎಲ್ ಡಿ ಎಫ್ ಮಂಡಿಸಿದ್ದ ಅವಿಶ್ವಾಸ ಗೊತ್ತುವಳಿಗೆ ಯು ಡಿ ಎಫ್ ಬೆಂಬಲಿಸಿದ್ದರಿಂದ ಬಿಜೆಪಿ ಅಧಿಕಾರ ಕಳೆದುಕೊಂಡಿತ್ತು. ಇದೀಗ ಎಣ್ಮಕಜೆಯಲ್ಲೂ ಬಿಜೆಪಿ ಅಧಿಕಾರ ಕಳೆದುಕೊಂಡಿದೆ