ಮಂಗಳೂರು, ಮಾ.06 (DaijiworldNews/MB): ''ಒಂದು ರಾಷ್ಟ್ರ, ಒಂದು ಚುನಾವಣೆ ಬಗ್ಗೆ ಚರ್ಚೆ ನಡೆಸುವುದು ಆಕಾಶಕ್ಕೆ ಮಟ್ಟಿಲಿಟ್ಟಂತೆ. ಡಾ.ಬಿ.ಆರ್.ಅಂಬೇಡ್ಕರ್ ಅವರ ಮೂಲ ಸಂವಿಧಾನದ ಚೌಕಟ್ಟನ್ನೇ ಪರೋಕ್ಷವಾಗಿ ಬದಲಾವಣೆ ಮಾಡುವ ಪಿತೂರಿ. ಅಷ್ಟಕ್ಕೂ ಇದು ಚರ್ಚಿಸುವ ವಿಷಯವೇ ಅಲ್ಲ'' ಎಂದು ಮಾಜಿ ಸಚಿವ ಯು.ಟಿ.ಖಾದರ್ ಹೇಳಿದ್ದಾರೆ.



ದ.ಕ. ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ''ಒಂದು ರಾಷ್ಟ್ರ ಒಂದು ಚುನಾವಣೆ ಎಂಬುದು ಪ್ರಸ್ತುತವಲ್ಲ. ಇದರಿಂದಾಗಿ ಪ್ರಾದೇಶಿಕ ಪಕ್ಷಗಳು ಹಾಗೂ ಪ್ರಾದೇಶಿಕ ಸಮಸ್ಯೆಗಳಿಗೆ ಯಾವುದೇ ಮಹತ್ವವೇ ದೊರೆಯುವುದಿಲ್ಲ. ಅಲ್ಲದೆ ಇದು ಪ್ರಜಾಪ್ರಭುತ್ವಕ್ಕೆ ವಿರುದ್ದವಾದದ್ದು. ಸಂವಿಧಾನದಲ್ಲೇ ಬದಲಾವಣೆ ಮಾಡಬೇಕಾಗುತ್ತದೆ. ಇದು ದೇಶದ ಸಾರ್ವಭೌಮತೆಗೆ ಧಕ್ಕೆ ತರಲಿದೆ. ಆ ನಿಟ್ಟಿನಲ್ಲಿ ಕಾಂಗ್ರೆಸ್ ಈ ಬಗ್ಗೆ ಯಾವುದೇ ಚರ್ಚೆಗೆ ಸಮ್ಮತಿಸಿಲ್ಲ, ಈ ವಿಚಾರದಲ್ಲಿ ಚರ್ಚಿಸುವ ಅವಶ್ಯಕತೆಯೂ ಇಲ್ಲ'' ಎಂದು ಹೇಳಿದರು.
''ಕೇಂದ್ರ ಸರಕಾರವು ಚರ್ಚೆ ಮಾಡಲು ಅವಕಾಶವಿದೆ ಎಂದು ಹೇಳಿದೆ. ಆದರೆ ಇದರ ಹೊರತಾಗಿ ನಮಗೆ ಚರ್ಚಿಸಲು ಜನಸಾಮಾನ್ಯರ ಹಲವು ಸಮಸ್ಯೆಗಳು ಕೂಡಾ ಇದೆ ಎಂದು ನಾವು ಅರಿತುಕೊಳ್ಳಬೇಕು'' ಎಂದರು.
''ತೈಲ ಬೆಲೆ, ಅಡುಗೆ ಅನಿಲ ದರ, ಜಿಎಸ್ಟಿಯಿಂದ ರಾಜ್ಯ ಸರ್ಕಾರಕ್ಕೆ ದೊರೆಯಬೇಕಾದ ಪಾಲಿನ ಬಗ್ಗೆ ಚರ್ಚಿಸುವೆಡೆ ಸರ್ಕಾರ ಗಮನಹರಿಸಲಿ'' ಎಂದು ಹೇಳಿದರು.
ಇನ್ನು ಕೆಂಜಾರಿನ ಗೋಶಾಲೆ ತೆರವು ಮಾಡಿದ ವಿಚಾರಕ್ಕೆ ಸಂಬಂಧಿಸಿ ಪ್ರತಿಕ್ರಿಯೆ ನೀಡಿದ ಅವರು, ''ಒಂದು ವೇಳೆ ಗೋಶಾಲೆ ಅಕ್ರಮವಾಗಿದ್ದರೆ, ಅಲ್ಲಿದ್ದ ದನಕರುಗಳ ವಾಸಕ್ಕೆ ಬೇರೆ ವ್ಯವಸ್ಥೆ ಮಾಡಿ ಬಳಿಕ ಅಲ್ಲಿ ತೆರವು ಕಾರ್ಯ ನಡೆಸಬೇಕು. ಸರ್ಕಾರ ಆ ದನಕರುಗಳನ್ನು ಬೇರೆ ಗೋಶಾಲೆಗಳಿಗೆ ಸ್ಥಳಾಂತರಿಸುವ ಜತೆಗೆ ಅಗತ್ಯ ಅನುದಾನವನ್ನು ನೀಡಬೇಕಿತ್ತು. ಯಾವುದೇ ವ್ಯವಸ್ಥೆ ಮಾಡದೆ ಒಮ್ಮಿಂದೊಮ್ಮೆ ಆ ಮೂಕ ಪ್ರಾಣಿಗಳನ್ನು ಬೀದಿಗೆ ಬಿಡುವುದು ಸರಿಯಲ್ಲ. ಗೋವುಗಳಿಗೂ ಅವುಗಳದ್ದೆ ಆದ ಹಕ್ಕಿಲ್ಲವೇ'' ಎಂದು ಪ್ರಶ್ನಿಸಿದರು.
''ಸಿದ್ದರಾಮಯ್ಯ ಸರಕಾರವಿದ್ದಾಗ ಆ ಜಾಗವನ್ನು ಕೋಸ್ಟ್ ಗಾರ್ಡ್ ಅಕಾಡಮಿಗೆ ಮಂಜೂರು ಮಾಡಿತ್ತು. ಆದರೆ ಈಗ ಈ ಜಾಗದ ಅತಿಕ್ರಮಣ ಸಮಸ್ಯೆಯನ್ನು ಬಗೆಹರಿಸದೆ ಜಿಲ್ಲಾಡಳಿತ ಗೋಶಾಲೆಯನ್ನೇ ಕೆಡವಿದೆ'' ಎಂದು ದೂರಿದರು.