ಸುಬ್ರಹ್ಮಣ್ಯ, ಮಾ.06 (DaijiworldNews/HR): ಕರ್ನಾಟಕದಲ್ಲಿ 1 ನೇ ತರಗತಿಯಿಂದ 6 ನೇ ತರಗತಿ ಆರಂಭಕ್ಕೆ ಆರೋಗ್ಯ ಇಲಾಖೆಯ ತಾಂತ್ರಿಕ ಸಲಹೆ ಪಡೆದ ಬಳಿಕ ನಿರ್ಧಾರ ತೆಗೆದುಕೊಳ್ಳಲಾಗುವುದು" ಎಂದು ರಾಜ್ಯ ಶಿಕ್ಷಣ ಸಚಿವ ಸುರೇಶ್ ಕುಮಾರ್ ಹೇಳಿದ್ದಾರೆ.

ಈ ಕುರಿತು ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಭೇಟಿ ನೀಡಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಎಲ್ಲವೂ ಸರಿ ಇರುತ್ತಿದ್ದರೆ ಮಾರ್ಚ್ 1 ರಿಂದಲೇ ತರಗತಿ ಆರಂಭಿಸಬೇಕಿತ್ತು. ಆದರೆ ರಾಜ್ಯದ ಕೆಲವು ಕಡೆಗಳಲ್ಲಿ ಕೊರೊನಾ ಸಂಖ್ಯೆಯಲ್ಲಿ ಹೆಚ್ಚಳವಾಗುತ್ತಿರುವ ಹಿನ್ನಲೆಯಲ್ಲಿ ಸದ್ಯಕ್ಕೆ ಈ ತೀರ್ಮಾನವನ್ನು ಕೈಬಿಡಲಾಗಿದೆ" ಎಂದರು.
" ಕರ್ನಾಟಕದಲ್ಲಿ 350 ಆಸುಪಾಸಿನಲ್ಲಿದ್ದ ಕೊರೊನಾ ಸಂಖ್ಯೆ ಶುಕ್ರವಾರದಿಂದ 600 ರ ಹತ್ತಿರ ಬಂದಿದೆ. ಇದರಿಂದಗಿ ತರಗತಿ ಆರಂಭಕ್ಕೆ ಮೊದಲು ಆರೋಗ್ಯ ಇಲಾಖೆಯ ತಾಂತ್ರಿಕ ಸಲಹಾ ಸಮಿತಿಯ ತೀರ್ಮಾನ ಪಡೆದುಕೊಳ್ಳಬೇಕಿದೆ" ಎಂದಿದ್ದಾರೆ.
ಇನ್ನು ಎಸ್ಎಸ್ಎಲ್ಸಿ ಪರೀಕ್ಷೆಯ ಸಂದರ್ಭದಲ್ಲೂ ಇದೇ ಸಮಿತಿಯ ಸಲಹೆ ಪಡೆಯಲಾಗಿತ್ತು. ಆದರೆ ಇದೀಗ ಕೆಲವು ಕಡೆಗಳಲ್ಲಿ ಕೊರೊನಾ ಸಂಖ್ಯೆ ಜಾಸ್ತಿಯಾಗುತ್ತಿದೆ ಎನ್ನುವ ಕಾರಣಕ್ಕೆ ಸದ್ಯಕ್ಕೆ ತರಗತಿ ಆರಂಭವನ್ನು ಸ್ಥಗಿತಗೊಳಿಸಲಾಗಿದ್ದು, ಆರೋಗ್ಯ ಸಲಹಾ ಸಮಿತಿ ಒಪ್ಪಿಗೆಯ ಬಳಿಕವೇ ತರಗತಿ ಆರಂಭಕ್ಕೆ ಸರಕಾರ ಕ್ರಮ ಕೈಗೊಳ್ಳಲಿದೆ" ಎಂದು ತಿಳಿಸಿದ್ದಾರೆ.