ಮಂಗಳೂರು, ಮಾ.06 (DaijiworldNews/MB): ಆಕಸ್ಮಿಕ ಬೆಂಕಿ ತಗಲಿ ಮನೆಯೊಂದು ಸಂಪೂರ್ಣ ಸುಟ್ಟು ಹೋಗಿರುವ ಘಟನೆ ತಲಪಾಡಿ ಗ್ರಾಮದ ತಚ್ಚಣಿ ಕ್ರಾಸ್ ಎಂಬಲ್ಲಿ ಮಾ.6 ರಂದು ಬೆಳಗ್ಗಿನ ಜಾವ ಸಂಭವಿಸಿದೆ.


ವಿನಯಕುಮಾರ್ ಎಂಬವರ ಮನೆಯಲ್ಲಿ ದುರಂತ ಸಂಭವಿಸಿದೆ. ಪತ್ನಿ ಚೈತ್ರ, ಮಕ್ಕಳಾದ ಧನ್ವಿನ್ ಹಾಗೂ ತೃಷಿಕ ಎಂಬವರ ಜತೆಯಲ್ಲಿ ಮನೆಯೊಳಗೆ ಮಲಗಿದ್ದ ಸಂದರ್ಭವೇ ಘಟನೆ ನಡೆದಿದೆ.
ಮನೆಯ ನಡುವಿನ ಹಾಲ್ನಲ್ಲಿ ಶಬ್ದ ಕೇಳಿ ಎಚ್ಚರವಾದಾಗ ಬೆಂಕಿ ತಗಲಿರುವುದು ಗಮನಕ್ಕೆ ಬಂದಿದೆ. ಕೂಡಲೇ ಮನೆಮಂದಿ ಹೊರ ಓಡಿಬಂದಿದ್ದು, ಈ ವೇಳೆ ಮನೆಯ ಮಾಡು, ಹಂಚು ಪೂರ್ತಿ ಸುಟ್ಟು ಹೋಗಿರುವುದಲ್ಲದೆ ಮನೆಯ ಗೃಹ ಬಳಕೆಯ ಸೊತ್ತುಗಳಾದ 2 ಕಬ್ಬಿಣದ ಕಪಾಡು, ಅದರೊಳಗಿದ್ದ ಜಾಗದ ದಾಖಲಾತಿಗಳು, ಬಟ್ಟೆ ಬರೆಗಳು, ಡೈನಿಂಗ್ ಟೇಬಲ್, ಮರದ ಕುರ್ಚಿಗಳು, ಕೃಷಿಗೆ ಮದ್ದು ಉಪಯೋಗಿಸುವ ಯಂತ್ರಗಳು, ಮನೆ ಪಾತ್ರೆಗಳು ಸೇರಿದಂತೆ ರೂ. 20 ಲಕ್ಷ ನಷ್ಟ ಉಂಟಾಗಿದೆ.
ಈ ಕುರಿತು ಮನೆಮಂದಿ ಉಳ್ಳಾಲ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.