ವಿಶೇಷ ವರದಿ - ಹರ್ಷಿಣಿ
ಉಡುಪಿ, ಮಾ.07 (DaijiworldNews/MB): ಉಡುಪಿ ಬಸ್ ಸ್ಟ್ಯಾಂಡ್, ಹಳೆ ಕಟ್ಟಡ, ಬೀದಿಗಳಲ್ಲಿ ಅಸ್ವಸ್ಥ ಮಹಿಳೆಯರು ಪುರುಷರು ಅಡ್ಡಾಡಿಕೊಂಡು ಇರುವುದನ್ನ ನೀವು ಗಮನಿಸಿದ್ದೀರಿ. ಆದರೆ ಅದೆಷ್ಟೋ ಮಂದಿ ನಗರದಲ್ಲಿ ಕಾಣೆಯಾಗುತ್ತಿದ್ದಾರೆ. ಹೆಚ್ಚಾಗಿ ಮಹಿಳೆಯರಿಗಿಂತ ಪುರುಷರೇ ಹೆಚ್ಚಾಗಿ ಸಾರ್ವಜನಿಕ ಸ್ಥಳಗಳಲ್ಲಿ ಕಾಣ ಸಿಗುತ್ತಾರೆ. ಆದರೆ ಇವರಿಗೆಲ್ಲ ರಕ್ಷಣೆ ಇದೆಯೇ? ಜಿಲ್ಲೆಯಲ್ಲಿ ಪುನರ್ವಸತಿ ಲಭಿಸುತ್ತಿದೆಯೇ?







ಉಡುಪಿಯಲ್ಲಿ ಹೆಚ್ಚಾಗಿ ಅಸ್ವಸ್ಥ ಮಹಿಳೆಯರು ಕಂಡರೆ ಆಸ್ಪತ್ರೆಗೋ ಅಥವಾ ಸಂಬಂಧ ಪಟ್ಟ ಇಲಾಖೆಗೋ ಮಾಹಿತಿ ಕೊಡುವುದಿರಲಿ. ಅವರು ತಮ್ಮ ಗಮನಕ್ಕೂ ಬಂದಿಲ್ಲ ಎಂಬಂತೆ ದೂರ ಹೋಗುತ್ತಾರೆ. ಈ ಹೆಣ್ಣು ಮಕ್ಕಳು ಇಲ್ಲಿ ಲೈಂಗಿಕವಾಗಿಯೂ ದುರುಪಯೋಗವಾಗುತ್ತಿದ್ದಾರಂತೆ. ನಗರದ ಒಳಗೆ ಬೆರಳೆಣಿಕೆಯ ಮಂದಿ ಇವರ ಸಹಾಯಕ್ಕೆ ಬರುತ್ತಾರೆ. ಅಗತ್ಯವಿದ್ದಲ್ಲಿ ಆಸ್ಪತ್ರೆಗೋ, ಪೋಲಿಸ್ ಇಲಾಖೆಗೆ ಮಾಹಿತಿ ಕೊಡುತ್ತಾರೆ.
ಜಿಲ್ಲಾ ಸರಕಾರಿ ಆಸ್ಪತ್ರೆಯಲ್ಲಿ ಇಲ್ಲ ಪ್ರತ್ಯೇಕ ವಾರ್ಡ್:
ಇದು ಹಳೆಯ ಕಟ್ಟಡವಾಗಿರುವುದರಿಂದ ಪುರುಷರಿಗೆ ಮತ್ತು ಮಹಿಳೆಯರಿಗೆ ಮಾತ್ರ ಪ್ರತ್ಯೇಕ ವಾರ್ಡ್ ಇದೆ. ಆದರೆ ಒಂದು ದೊಡ್ಡ ವಾರ್ಡನಲ್ಲಿ ಯಾವುದೇ ಪ್ರತ್ಯೇಕ ಪ್ರತ್ಯೇಕ ಕೊಠಡಿಗಳಿಲ್ಲ. ಕೆಲವು ತುರ್ತು ಮತ್ತು ಗಂಭೀರ ಪ್ರಕರಣಗಳನ್ನು ಹೊರತು ಪಡಿಸಿದರೆ, ಪುಟ್ಟ ಮಗುವಿನಿಂದ ಹಿಡಿದು ವೃದ್ದರವರೆಗೆ (ಕೆಲವು ಮಾನಸಿಕ ಅಸ್ವಸ್ಥರೂ ಸೇರಿದಂತೆ) ಒಂದೇ ಉದ್ದದ ವಾರ್ಡ್ನಲ್ಲಿ ಎಲ್ಲರೂ ಒಟ್ಟಾಗಿಯೇ ಇರುತ್ತಾರೆ. ಇದರಿಂದ ಆರೋಗ್ಯವಿರುವವರಿಗೂ ತೊಂದರೆಯಾಗುತ್ತಿದೆ.
ಅಜ್ಜರಕಾಡಿನಲ್ಲಿರುವ ಆಸ್ಪತ್ರೆ ಅನಾಥಾಲಾಯ ಆಗುತ್ತಿದೆಯೇ?
ಮನವೀಯ ದೃಷ್ಟಿಯಲ್ಲಿ ಸಾಮಾಜಿಕ ಕಾರ್ಯಕರ್ತರು, ಸಾರ್ವಜನಿಕರು ಮಾನಸಿಕ ಅಸ್ವಸ್ಥರನ್ನು ಪ್ರವೇಶಾತಿ ಮಾಡಿ ಹೋಗುತ್ತಾರೆ. ಕೆಲವರ ನಡವಳಿಕೆಗಳು ನಿಯಂತ್ರಣ ಮಾಡದಿರುವ ಸ್ಥಿತಿಯಲ್ಲಿರುತ್ತದೆ. ಅಂತವರನ್ನು ಸಲಹುವುದು, ಕೌನ್ಸೆಲಿಂಗ್ ಮಾಡುವುದು ಅಷ್ಟು ಸುಲಭದ ಮಾತಲ್ಲ. ನುರಿತ ತಜ್ಞರು ಬೇಕಾಗಿರುತ್ತದೆ. ಹಾಗಾಗಿ ಖಾಸಗಿ ಆಸ್ಪತ್ರೆ ಇದ್ದರೂ ಅನಾಥರಾಗಿದ್ದರೆ ಸರಕಾರಿ ಆಸ್ಪತ್ರೆಯಲ್ಲಿರಬೇಕು. ಚಿಕಿತ್ಸೆ ಮುಗಿಯುವವರೆಗೂ ಇಲ್ಲೇ ಇರಬೇಕಾಗುತ್ತದೆ. ಹಾಗಾಗಿ ಅಜ್ಜರಕಾಡು ಆಸ್ಪತ್ರೆ ಒಂದು ಅನಾಥಾಲಯವೇ ಆಗಿದೆ.
ಅನಾಥರಾಗಿದ್ದರೆ ಆಸ್ಪತ್ರೆ ಚಿಕಿತ್ಸೆ ಆಯ್ತು ಮುಂದೇನು?
ಹಾಗೋ ಹೀಗೋ ಚಿಕೆತ್ಸೆ ಪಡೆದುಕೊಂಡು ಒಂದು ಸ್ಥಿತಿಗೆ ಬರುವವರೆಗೆ ಮಾತ್ರ ಆಸ್ಪತ್ರೆಯಲ್ಲಿ ತಂಗಲು ಅವಕಾಶ ಇದೆ. ಮುಂದೆ, ಕೇವಲ ಐದು ದಿನ ನಿಟ್ಟೂರಿನಲ್ಲಿರುವ ಸಖಿ ಕೇಂದ್ರದಲ್ಲಿ ಉಳಿದುಬಹುದು. ಹೆಚ್ಚಾಗಿ ಅಲ್ಲಿ ದೌರ್ಜನ್ಯಕ್ಕೆ ಒಳಗಾದವರು ಸಂತ್ರಸ್ತರು ಇರುವುದಕ್ಕೆ ನಿರ್ಮಿಸಿದ ಕೇಂದ್ರ. ಮಾನಸಿಕ ಅಸ್ವಸ್ಥರಿಗಲ್ಲ. ಇನ್ನು ವiಹಿಳಾ ಸಾಂತ್ವನದಲ್ಲಿ ಕೂಡ ಅವರಿಗೆ ಪುನರ್ವಸತಿ ಕಲ್ಪಿಸಲು ಸೂಕ್ತ ಸೌಲಭ್ಯ ಇಲ್ಲ. ಇನ್ನು ಖಾಸಗಿಯಾಗಿ ಸಾಕಷ್ಟು ಅನಾಥಶ್ರಮಗಳಿದ್ದರೂ ಅವರ ಸುರಕ್ಷತೆ ಕೂಡ ಅಷ್ಟೇ ಮುಖ್ಯವಾಗಿರುತ್ತದೆ. ಕೆಲವೊಮ್ಮೆ ಸಾಮಾಜಿಕ ಕಾರ್ಯಕರ್ತರೇ ಅವರನ್ನು ಮಾನಸಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ, ಗೊತ್ತಾದರೆ ಅವರ ಕುಟುಂಬದವರನ್ನು ಪತ್ತೆ ಹಚ್ಚಿ ಅವರಿಗೆ ಒಪ್ಪಿಸುತ್ತಾರೆ.
ಓರ್ವ ಅಸ್ವಸ್ಥ ಮಹಿಳೆ ಇರಬಹುದು ಅಥವಾ ಅನಾಥೆ ಇರಬಹುದು. ರಾತ್ರಿ ಸಾರ್ವಜನಿಕ ಸ್ಥಳಗ|ಳಲ್ಲಿ ಮಲಗುವಂತಹ ಪರಿಸ್ಥಿತಿ ಬರಬಾರದು. ಆಕೆಯನ್ನು ಅಸಹಾಯಕ ಸ್ಥಿತಿಯಲ್ಲಿದ್ದಾಗ ದುರುಪಯೋಗ ಪಡಿಸಿಕೊಳ್ಳುವ ಸಾಧ್ಯತೆ ಹೆಚ್ಚು, ಹಾಗಾಗಿ ಆಕೆಯ ರಕ್ಷಣೆಗೆ ಸರಕಾರದ ಸಂಸ್ಥೆ ಭೇಕು. ಆ ಸಂಸ್ಥೆಗೆ ಅವಶ್ಯಕ ಸಿಬ್ಬಂದಿಗಳನ್ನು ನೀಡಿದರು. ನೀಡಬೇಕೆಂಬುದು ಸಾಮಾಜಿಕ ಕಾರ್ಯಕರ್ತರಾದ ವಿಶು ಶೆಟ್ಟಿ ಅಂಬಲ್ಪಾಡಿಯವರ ಒತ್ತಾಯ.
ನಮ್ಮ ಪೋಲಿಸ್ ಇಲಾಖೆಯಿಂದಲೂ ಸಾಕಷ್ಟು ರಕ್ಷಣೆ ಕಾರ್ಯ ನಡೆಯುತ್ತದೆ. ಒಮ್ಮೆ ಚಿಕಿತ್ಸೆ ಪಡೆದ ನಂತರ ಯಾವುದೇ ಆಶ್ರಯ ಸಿಗದೆ ಬೀದಿಗೆ ಬೀಳುತ್ತಾರೆ. ಈ ಪರಿಸ್ಥಿತಿಗೆ ಒಂದು ವ್ಯವಸ್ಥೆ ಅಗತ್ಯವಾಗಿ ಜಿಲ್ಲೆಗೆ ಬೇಕಾಗಿದೆ ಮಹಿಳೆ ಶೋಚನೀಯ ಅವಸ್ಥೆಯಲ್ಲಿ ಸಾರ್ವಜನಿಕ ಸ್ಥಳದಲ್ಲಿ ಕಂಡರೆ ರಾಣಿ ಅಬ್ಬಕ್ಕ ಪಡೆಗೂ ತಿಳಿಸ ಬಹುದಾಗಿದೆ ಎನ್ನುತ್ತಾರೆ ಮಹಿಳಾ ಠಾಣೆಯ ಮುಖ್ಯಸ್ಥೆಯಾಗಿರುವ ವಯಲೆಟ್ ಫೆಮಿನಾ.
ಇನ್ನು ಉಡುಪಿಯಲ್ಲಿ ಖಾಲಿ ಬಿದ್ದಿರುವ ಹಲವಾರು ಕಟ್ಟಡಗಳಿವೆ. ಜಿಲ್ಲಾಡಳಿತ ಈ ಬಗ್ಗೆ ಆಸಕ್ತಿ ತೆಗೆದುಕೊಂಡು ಪುನರ್ವಸತಿ ಕಲ್ಪಿಸುವ ವ್ಯಸ್ಥೆಯನ್ನು ಮಾಡಬಹುದಾಗಿದೆ.