ಸುಬ್ರಹ್ಮಣ್ಯ, ಅ 8: ಬಿಸ್ಲೆ ಹಾಗೂ ಕುಮಾರ ಪರ್ವತ ಭಾಗದಲ್ಲಿ ಹಾಗೂ ಸುಬ್ರಹ್ಮಣ್ಯ ಪರಿಸರದಲ್ಲಿ ಮಂಗಳವಾರ ರಾತ್ರಿಯಿಂದ ಬುಧವಾರದ ತನಕ ನಿರಂತರ ಸುರಿದ ಮಳೆಗೆ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಕುಮಾರಧಾರ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಇದರಿಂದಾಗಿ ಕುಮಾರಧಾರ ಸ್ನಾನಘಟ್ಟ ಸಂಪೂರ್ಣ ಜಲಾವೃತಗೊಂಡಿದೆ.
ಇದಲ್ಲದೆ ಕುಕ್ಕೆಯ ಪರಿಸರದಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಗ್ರಾಮೀಣ ಪ್ರದೇಶದಲ್ಲಿ ನದಿ ತೊರೆ, ಹಳ್ಳ ಕೊಳ್ಳಗಳು ತುಂಬಿ ಹರಿಯುತ್ತಿದೆ. ಎಲ್ಲಾ ಕಡೆಯಲ್ಲಿ ಪ್ರವಾಹದ ವಾತಾವರಣ ಸೃಷ್ಠಿಯಾಗಿದೆ. ಈ ಬಾರಿಯ ಮಳೆಗಾಲದಲ್ಲಿ ಅತೀ ಹೆಚ್ಚು ಮಳೆ ಸುರಿದಿದೆ. ವಿಪರೀತ ಮಳೆಯ ಹಿನ್ನೆಲೆ ಮುನ್ನೆಚ್ಚರಿಕೆ ಕ್ರಮವಾಗಿ ಸುಬ್ರಹ್ಮಣ್ಯ ಶಾಲಾ-ಕಾಲೇಜುಗಳಿಗೆ ಮದ್ಯಾಹ್ನದ ಬಳಿಕ ರಜೆ ನೀಡಲಾಗಿತ್ತು.
ಕುಮಾರಧಾರ ನದಿಯ ಉಪನದಿಯಾದ ದರ್ಪಣತೀರ್ಥ ನದಿಯು ಮೈದುಂಬಿ ಹರಿಯುತ್ತಿದೆ. ಇದರ ನೀರು ಕುಕ್ಕೆ ಪರಿಸರದ ಕೆಲವೊಂದು ಕೃಷಿ ತೋಟಗಳಿಗೆ ನುಗ್ಗಿದೆ. ಇದರಿಂದಾಗಿ ಅನೇಕ ಫಲವಸ್ತುಗಳು ಹಾಗೂ ಕೃಷಿಕರು ಹಾಕಿದ್ದ ಗೊಬ್ಬರ ನೀರು ಪಾಲಾಗಿದೆ. ಅಲ್ಲದೆ ಪುತ್ತೂರು-ಸುಬ್ರಹ್ಮಣ್ಯ ರಸ್ತೆಗೆ ಕುಮಾರಧಾರ ಸ್ನಾನಘಟ್ಟದ ಬಳಿ ನಿರ್ಮಿತವಾಗಿದ್ದ ಎತ್ತರವಾದ ದರ್ಪಣತೀರ್ಥ ಸೇತುವೆಯು ಮುಳುಗಡೆ ಭೀತಿಯನ್ನು ಎದುರಿಸುತ್ತಿದೆ.
ದರ್ಪಣ ತೀರ್ಥ ನದಿಯು ತುಂಬಿ ಹರಿಯುತ್ತಿರುವುದರಿಂದ ನದಿ ತಟದ ಕೃಷಿ ತೋಟಗಳಿಗೆ ನೀರು ನುಗ್ಗಿ ಕೃಷಿ ಸಂಪತ್ತು ನೀರು ಪಾಲಾಗಿದೆ. ಸುಮಾರು ಮೂರು ಅಡಿಗಳಿಗೂ ಅಧಿಕವಾದ ನೀರು ತೋಟದಲ್ಲಿ ತುಂಬಿದೆ. ನೀರಾವರಿಗಾಗಿ ಅಳವಡಿಸಿದ್ದ ಸ್ಪಿಂಕ್ಲರ್ಗಳು ಧ್ವಂಸಗೊಂಡಿದೆ.