ಕಾಸರಗೋಡು, ಮಾ. 07 (DaijiworldNews/SM): ವೃತ್ತಿಪರ ಮೌಲ್ಯ ಕಾಪಾಡುವುದರ ಜೊತೆಗೆ ವಿಶ್ವಸಾರ್ಹತೆ ಯೊಂದಿಗೆ ಕಾರ್ಯನಿರ್ವಹಿಸಲು ಪತ್ರಕರ್ತರು ಬದ್ಧರಾಗಬೇಕು ಎಂದು ಏಷ್ಯಾ ಪತ್ರಕರ್ತರ ಒಕ್ಕೂಟದ ಸಂಚಾಲಕ ಮದನ ಗೌಡ ಅಭಿಪ್ರಾಯಪಟ್ಟರು.

ಅವರು ಆದಿತ್ಯವಾರ ನಗರದ ಹೈವೇ ಕ್ಯಾಸೆಲ್ ಸಭಾಂಗಣದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಘಟಕದ ಉದ್ಘಾಟನೆ ಹಾಗೂ ಕನ್ನಡ ಪತ್ರಕರ್ತರ ಸಮಾವೇಶವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಗಡಿನಾಡ ಕನ್ನಡಿಗರ ಮಾತೃ ಭಾಷಾ ಪ್ರೇಮ ಇಲ್ಲಿನ ಕನ್ನಡಪರ ಚಟುವಟಿಕೆಗಳಿಗೆ ಪ್ರೇರಣೆಯಾಗಿದೆ ಎಂದು ಹೇಳಿದರು.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು ಅಧ್ಯಕ್ಷತೆ ವಹಿಸಿದ್ದರು. ಗಡಿನಾಡಿನ ಪತ್ರಕರ್ತರು ಕನ್ನಡ ಉಳಿಸಲು ನೀಡುವ ಪ್ರಯತ್ನ ಶ್ಲಾಘನೀಯ. ಕರ್ನಾಟಕದಲ್ಲಿ ಪತ್ರಕರ್ತರಿಗೆ ಲಭಿಸುವ ಸೌಲಭ್ಯ ಗಡಿನಾಡಿನ ಪತ್ರಕರ್ತರಿಗೂ ಲಭಿಸಬೇಕಿದೆ ಎಂದು ಹೇಳಿದ ಅವರು, ಹಿರಿಯ ಪತ್ರಕರ್ತರನ್ನು ಗೌರವಿಸುವುದರ ಜೊತೆಗೆ ಆದರ್ಶ ಪಾಲಿಸುವ ಮೂಲಕ ಸಂಘಟನೆಯನ್ನು ಕ್ರಿಯಾತ್ಮಕವಾಗಿ ಮುನ್ನೆಡೆಸಿಕೊಂಡು ಹೋಗಲು ಸಂಘಟನೆಯ ಎಲ್ಲಾ ಸದಸ್ಯರು ಕಾರ್ಯಪ್ರವೃತ್ತರಾಗಬೇಕಿದೆ ಎಂದರು.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ದ. ಕ. ಜಿಲ್ಲಾ ಘಟಕಾಧ್ಯಕ್ಷ ಶ್ರೀನಿವಾಸ್ ನಾಯಕ್ ಇಂದಾಜೆ, ಕಾರ್ಯದರ್ಶಿ ಇಬ್ರಾಹಿಂ ಅಡ್ಕಸ್ಥಳ , ಜಿಲ್ಲಾ ಪಂಚಾಯತ್ ಸದಸ್ಯ ಗೋಲ್ಡನ್ ಅಬ್ದುಲ್ ಖಾದರ್ , ಮಹಾರಾಷ್ಟ್ರ ಘಟಕ ಕನ್ನಡ ಪತ್ರಕರ್ತರ ಸಂಘದ ಅಧ್ಯಕ್ಷ ರೋನ್ಸ್ ಬಂಟ್ವಾಳ್ , ಕನ್ನಡ ಪತ್ರಕರ್ತರ ಸಂಘದ ನಿಕಟಪೂರ್ವ ಅಧ್ಯಕ್ಷ ಅಚ್ಯುತ ಚೇವಾರ್ , ಕೆ . ಯು ಡಬ್ಲ್ಯೂ ಜೆ ಜಿಲ್ಲಾಧ್ಯಕ್ಷ ಎ.ಆರ್ ಸುಬ್ಬಯ್ಯ ಕಟ್ಟೆ ಮೊದಲಾದವರು ಉಪಸ್ಥಿತರಿದ್ದರು. ಸಮಾರಂಭದಲ್ಲಿ ಹಿರಿಯ ಪತ್ರಕರ್ತರಾದ ಮಲಾರ್ ಜಯರಾಮ ರೈ, ಟಿ.ಶಂಕರ ನಾರಾಯಣ ಭಟ್, ರಾಧಾಕೃಷ್ಣ ಉಳಿಯತ್ತ ಡ್ಕ, ಕಿದೂರು ಶಂಕರ ನಾರಾಯಣ ಭಟ್, ಕೆ.ಭಾಸ್ಕರ, ಬಿ. ಪಿ ಶೇಣಿ ಹಾಗೂ ದೇವದಾಸ್ ಪಾರೆಕಟ್ಟೆ ಮೊದಲಾದವರನ್ನು ಗೌರವಿಸಲಾಯಿತು.