ಮಂಗಳೂರು ಮಾ 08 (DaijiworldNews/MS): ಕ್ರೀಡಾ ಚಟುವಟಿಕೆಗಳಲ್ಲಿ ಭಾಗವಹಿಸುವುದರಿಂದ ಮನುಷ್ಯ ದೈಹಿಕ ಮತ್ತು ಮಾನಸಿಕ ಸದೃಢತೆಯನ್ನು ಹೊಂದುವುದರೊಂದಿಗೆ ಉತ್ತಮ ಆರೋಗ್ಯಹೊಂದಲು ಸಹಕಾರಿಯಾಗುತ್ತದೆ ಎಂದು ಕರಾವಳಿ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ ಹೇಳಿದರು.

ಅವರು ಭಾನುವಾರ ನಗರದ ಮಂಗಳ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಾನಗರ ಪಾಲಿಕೆ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಮಂಗಳೂರು ರವರ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಸಮುದಾಯದ ಕ್ರೀಡಾಕೂಟ ಮತ್ತು ತರಬೇತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳು ಕ್ರೀಡಾಚಟುವಟಿಕೆಗಳಲ್ಲಿ ಭಾಗವಹಿಸುವುದರೂಂದಿಗೆ ದೈಹಿಕವಾಗಿ ಮತ್ತು ಮಾನಸಿಕವಾಗಿ ಸದೃಢರಾಗಿ ಉತ್ತಮ ಆರೋಗ್ಯವನ್ನು ಹೊಂದಬೇಕು ಎಂದರು.
ಗ್ರಾಮೀಣ ಭಾಗದ ತೆರೆಮರೆಯಲ್ಲಿ ಅಡಗಿರುವ ಕ್ರೀಡಾ ಪ್ರತಿಭೆಗಳನ್ನು ಗುರುತಿಸುವ ನಿಟ್ಟಿನಲ್ಲಿ ಸರ್ಕಾರ ಜಾರಿಗೆ ತಂದಿರುವ ಹಲವು ಮಹತ್ವಾಕಾಂಕ್ಷೆಯ ಯೋಜನೆಗಳಿಗೆ ಹೆಚ್ಚು ಒತ್ತು ನೀಡುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದರು.
ಯುವಜನರಲ್ಲಿ ಅಡಗಿರುವ ಪ್ರತಿಭೆಯನ್ನು ತೋರ್ಪಡಿಸಲು ಈ ಕ್ರೀಡಾಕೂಟ ಮತ್ತು ತರಬೇತಿ ಕಾರ್ಯಕ್ರಮ ಉತ್ತಮ ವೇದಿಕೆಯಾಗಿದೆ ಎಂದ ಅವರು ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಿದ ಯುವಕರ ಪ್ರತಿಭೆಯನ್ನು ಹೊರ ತರುವ ಕೆಲಸ ಮಾಡಬೇಕು.ಕೇವಲ ತಾಲೂಕು ಮಟ್ಟದಲ್ಲಿ ಅಲ್ಲದೆ ಗ್ರಾಮೀಣ ಭಾಗದ ಯುವಕರಿಗೆ ಶಕ್ತಿ ತುಂಬುವ ಕಾರ್ಯವಾಗಬೇಕು ಎಂದರು.
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳು ಸರ್ಕಾರದಿಂದ ಅನುಷ್ಠಾನಗೊಂಡಿರುವ ಹಲವಾರು ಯೋಜನೆಗಳ ಉಪಯೋಗವನ್ನು ಪಡೆದುಕೊಳ್ಳುವುದರೊಂದಿಗೆ ಉತ್ತಮ ಶಿಕ್ಷಣವನ್ನು ಪಡೆದು ಆರ್ಥಿಕವಾಗಿ ಸಬಲರಾಗಿ ಸ್ವಾವಲಂಬಿಗಳಾಗಬೇಕು ಎಂದರು.ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳು ಸಮಾಜದ ಮುಖ್ಯವಾಹಿನಿಯಲ್ಲಿ ನೆಲೆ ನಿಲ್ಲಬೇಕು ಎಂದರು.
ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು ಮಾತನಾಡಿ, ಹಿಂದುಳಿದ ಸಮುದಾಯದಲ್ಲಿನ ಹಲವಾರು ಪ್ರತಿಭಾವಂತ ವಿದ್ಯಾರ್ಥಿಗಳು ಆರ್ಥಿಕವಾಗಿ, ಸಾಮಾಜಿಕವಾಗಿ ಹಾಗೂ ಶೈಕ್ಷಣಿಕವಾಗಿ ಸಮಾಜದ ಮುಖ್ಯವಾಹಿನಿಯಲ್ಲಿ ಕಾಣಿಸಿಕೊಳ್ಳಬೇಕು ಎಂದರು.ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಗುರುತಿಸಲು ಕ್ರೀಡಾಕೂಟ ಮತ್ತು ತರಬೇತಿ ಸಹಕಾರಿಯಾಗಿದೆ ಎಂದ ಅವರು ಸರ್ಕಾರದಿಂದ ಸಿಗುವ ಸೌಲಭ್ಯಗಳನ್ನು ಸರಿಯಾದ ರೀತಿಯಲ್ಲಿ ವಿದ್ಯಾರ್ಥಿಗಳು ಉಪಯೋಗಿಸಿಕೊಳ್ಳಬೇಕು ಎಂದರು .
ಕಾರ್ಯಕ್ರಮದಲ್ಲಿ ಶಾಸಕ ವೇದವ್ಯಾಸ್ ಕಾಮತ್, ಜಿಲ್ಲಾ ಪಂಚಾಯತ್ ಉಪಾಧ್ಯಕ್ಷೆ ಕಸ್ತೂರಿ ಪಂಜ, ನೆಹರು ಕೇಂದ್ರದ ಉಪನಿರ್ದೇಶಕ ರಘುವೀರ್ ಸೂಟರ್ ಪೇಟೆ, ಮಂಗಳೂರು ವಿಶ್ವವಿದ್ಯಾನಿಲಯದ ಕ್ರೀಡಾ ಉಸ್ತುವಾರಿ ಅಧಿಕಾರಿ ಹರಿದಾಸ್ ಕೊಳೂರು, ಮೋಹನಾಂಗಯ್ಯ ಸ್ವಾಮಿ, ಮಾಜಿ ಮೇಯರ್ ಪ್ರವೀಣ್ ಅಂಚನ್, ನೋಡಲ್ ಅಧಿಕಾರಿ ವಿನೋದ್ ಕುಮಾರ್,ಪ್ರೇಮ್ ಕೊಡಿಯಲ್ ಬೈಲು ಹಾಗೂ ಪ್ರಮುಖರು ಉಪಸ್ಥಿತರಿದ್ದರು.