ಸುಬ್ರಹ್ಮಣ್ಯ, ಅ 8: ಕಡಬ- ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿ ನಡುವಿನ ಕೈಕಂಬ ಎಂಬಲ್ಲಿ ರಸ್ತೆ ಬದಿ ವಾಸವಿರುವ ಕೃಷಿಕ ಪದ್ಮನಾಭ ಕಳಿಗೆ ಅವರ ಮನೆ ಅಂಗಳದಲ್ಲಿ ರಾತ್ರಿ 1 ಗಂಟೆಗೆ ಆನೆ ಕಾಣಿಸಿಕೊಂಡಿದೆ. ಹೆದ್ದಾರಿಗೆ ತಾಗಿಕೊಂಡು ಇವರ ಮನೆ ಇದ್ದು ನಡುರಾತ್ರಿ ವೇಳೆಗೆ ಮನೆಯವರಿಗೆ ಶಬ್ಧ ಕೇಳಿಸಿದೆ. ಮನೆಯಿಂದ ಹೊರ ಬಂದು ಅಂಗಳಕ್ಕೆ ಬೆಳಕು ಹಾಕಿದಾಗ ಅಂಗಳದಲ್ಲೆ ಆನೆ ಇತ್ತು ಎನ್ನಲಾಗಿದೆ. ಭೀತಿಗೆ ಒಳಗಾದ ಅವರು ಮನೆಯ ಸುತ್ತಲು ಬೆಳಕು ಮೂಡುವಂತೆ ಮಾಡಿದ್ದಾರೆ.
ಆನೆಯು ಮಾರ್ಗ ಬದಿ ಅಳವಡಿಸಿದ ಮರದ ಗೇಟನ್ನು ಮುರಿದು ಅಂಗಳ ಪ್ರವೇಶಿಸಿದೆ. ಅಂಗಳದಲ್ಲಿ ತುಂಬಾ ಹೊತ್ತು ಓಡಾಡಿದೆ. ಬಳಿಕ ಅವರ ತೋಟದ ಮೂಲಕ ಪಕ್ಕದ ಕೃಷಿಕ ನಾರಾಯಣ ಗೌಡ ಕಳಿಗೆ ಅವರ ತೋಟಕ್ಕೆ ತೆರಳಿ ಅವರ ತೋಟದಲ್ಲಿ ಫಸಲು ನಾಶಪಡಿಸಿದೆ. ಪದ್ಮನಾಭ ಅವರ ಮನೆಯ ಅಂಗಳದಲ್ಲಿ ಆನೆ ಓಡಾಡಿದ ಹೆಜ್ಜೆ ಗುರುತು ಕಾಣಿಸಿಕೊಂಡಿದೆ.
ಈ ಭಾಗದಲ್ಲಿ ಕಾಡಾನೆಗಳು ಹಲವು ಸಮಯಗಳಿಂದ ಉಪಟಳ ನೀಡುತ್ತಿವೆ. ಆನೆಗಳು ಕೃಷಿಕರ ತೋಟಕ್ಕೆ ನುಗ್ಗಿ ಫಲಭರಿತ ತೆಂಗಿನ ಸಸಿ, ಅಡಿಕೆ ಸಸಿ ಹಾಗೂ ಬಾಳೆ ಸಸಿಗಳನ್ನು ತಿಂದು ಹಾನಿಗೊಳಿಸುತ್ತಿವೆ. ಸಮೀಪದ ಕುಕ್ಕಾಜೆ, ಮುಳ್ಳುಗುಡ್ಡೆ ಕಾಳಪ್ಪಾಡಿ ಪರಿಸರದಲ್ಲಿ ಕೂಡ ಕಾಡಾನೆ ಹಾವಳಿ ತೀವೃಗೊಂಡ ಕುರಿತು ಸ್ಥಳಿಯರು ಅಳಲು ತೋಡಿಕೊಂಡಿದ್ದಾರೆ.