ಮಣಿಪಾಲ, ಮಾ.08 (DaijiworldNews/MB): ಕಂಬಳದದಲ್ಲಿ ರಾಜಮರ್ಯಾದೆ ಪಡೆದ, ಹಲವು ಕಂಬಳ ಕರೆಯಲ್ಲಿ ಪದಕ ಪಡೆದ ಕುಟ್ಟಿ ಇದೀಗ ಚಿರ ನಿದ್ರೆಗೆ ಜಾರಿದ್ದಾನೆ. ಚಾಂಪಿಯನ್ ಕೋಣಗಳಿಗೆ ಜೊತೆಯಾಗಿದ್ದ ಚಾಂಪಿಯನ್ ಕುಟ್ಟಿ ಅಲ್ಪ ಕಾಲದ ಅಸೌಖ್ಯದಿಂದ ರವಿವಾರ ಅಸುನೀಗಿದ್ದಾನೆ.

ಏದೋಟ್ಟು ರಾಜು ಶೆಟ್ಟಿಯವರ ಬಳಿಯಿದ್ದ ಈ ಕುಟ್ಟಿ ಮಣಿಪಾಲದಲ್ಲಿ ನಡೆದ ಅನಂತ - ಮಾಧವ ಕಂಬಳದಲ್ಲಿ ಹಗ್ಗ ಕಿರಿಯ ವಿಭಾಗದಲ್ಲಿ ದ್ವಿತೀಯ ಬಹುಮಾನ ಪಡೆದಿದ್ದ. ಆತನ ಓಟಕ್ಕೆ ಮನಸೋತ ಅಲೆವೂರು ರಾಘು ಶೆಟ್ಟಿಯವರು ಆತನನ್ನು ತಮ್ಮ ಬಳಗಕ್ಕೆ ಸೇರಿಸಿದ್ದು ಬಳಿಕ ಆತ ಅಲೆವೂರು ಕುಟ್ಟಿ ಎಂದೇ ಹೆಸರು ಪಡೆದ.
ಬಾರಾಡಿ ಸೂರ್ಯ- ಚಂದ್ರ ಕಂಬಳದಲ್ಲಿ ತನ್ನ ಮೊದಲ ನೇಗಿಲು ಕಿರಿಯ ವಿಭಾಗದಲ್ಲಿಯೇ ಪ್ರಶಸ್ತಿ ಗಳಿಸಿದ. 2009-10ರಲ್ಲಿ ಹಲವು ಕಡೆಗಳಲ್ಲಿ ಆತ ತನ್ನ ಓಟದ ರಭಸದಿಂದ ಪ್ರಶಸ್ತಿಯನ್ನು ಬಾಚಿಕೊಂಡಿದ್ದಾನೆ.
2010-11ರಲ್ಲಿ ಸೀನಿಯರ್ ವಿಭಾಗಕ್ಕೆ ಕುಟ್ಟಿ ಪ್ರವೇಶಿಸಿದ್ದು 14 ಕಂಬಳದಲ್ಲಿ ಮೊದಲ ಪ್ರಶಸ್ತಿ ಪಡೆದಿದ್ದಾನೆ. ಮುಂದಿನ ವರ್ಷ 12 ಪ್ರಥಮ, ಎರಡು ದ್ವಿತೀಯ ಪ್ರಶಸ್ತಿ ತನ್ನದಾಗಿಸಿದ್ದಾನೆ.
ಬಳಿಕ ತಂಡಬೈಲ್ ನಾಗೇಶ್ ದೇವಾಡಿಗರು ಕುಟ್ಟಿಯನ್ನು ತಮ್ಮ ಬಳಗಕ್ಕೆ ಸೇರಿಸಿಕೊಂಡರು. ಅಲೆವೂರು ಕುಟ್ಟಿ ಅಲ್ಲಿಂದ ತಡಂಬೈಲ್ ಕುಟ್ಟಿಯಾದ. ನಾಲ್ಕೈದು ವರ್ಷಗಳ ಹಿಂದೆ ಮೂಡುಬಿದಿರೆ ಕಂಬಳದಲ್ಲಿ 144.5 ಮೀಟರ್ ದೂರವನ್ನು ಕೇವಲ 14.01 ಸೆಕೆಂಡ್ನಲ್ಲಿ ಓಡಿ ಗುರಿ ತಲುಪಿದ್ದ ಕುಟ್ಟಿ ಹಾಗೂ ಮುಕೇಶ ಆ ಕಾಲದ ದಾಖಲೆ ನಿರ್ಮಿಸಿದ್ದರು.