ಸುಳ್ಯ, ಮಾ.08 (DaijiworldNews/MB): ಸುಳ್ಯದ ಅರಂಬೂರು ಭಾರದ್ವಾಜ ಆಶ್ರಮದಲ್ಲಿ ವೇದಾಧ್ಯಯನ ಕಲಿಯುತ್ತಿದ್ದ,ಪುತ್ತೂರು ತಾಲೂಕಿನ ಕೌಡಿಚ್ಚಾರಿನ ದರ್ಬೆತ್ತಡ್ಕ ನಿವಾಸಿ ಗೋಪಾಲಕೃಷ್ಣ ಭಟ್ ಅವರ ಪುತ್ರ ಉದನೇಶ್ವರ ಭಟ್ (18) ಎಂಬವರು ಸ್ನಾನಕ್ಕೆಂದು ಸಮೀಪದ ನದಿಗೆ ಇಳಿದಾಗ ಕಾಲು ಜಾರಿ ನದಿಗೆ ಬಿದ್ದು ಮೃತಪಟ್ಟ ಘಟನೆ ನಡೆದಿದೆ.

ಉದನೇಶ್ವರ ಅವರು ಸೇರಿದಂತೆ ರವಿವಾರ ಸಂಜೆ ವೇದಾಧ್ಯಯನ ತರಗತಿಯ 7 ಜನ ವಿದ್ಯಾರ್ಥಿಗಳು ಅರಂಬೂರಿನ ಪಯಸ್ವಿನಿ ನದಿಗೆ ಸ್ನಾನಕ್ಕಿಳಿದಿದ್ದರು.ಆ ವೇಳೆ ಉದನೇಶ್ವರ ನೀರಿನಲ್ಲಿ ಮುಳುಗಿದ್ದಾರೆ ಎನ್ನಲಾಗಿದೆ. ಆದರೆ ಇದು ಅವರ ಜೊತೆಗೆ ಇದ್ದವರ ಗಮನಕ್ಕೆ ಬಂದಿರಲಿಲ್ಲ.
ಉದನೇಶ್ವರ ಅವರು ಕಾಣದೇ ಇದ್ದರಿಂದ ಆತ ಆಶ್ರಮಕ್ಕೆ ತೆರಳಿರಬೇಕೆಂದು ಭಾವಿಸಿದ್ದರು. ಉದನೇಶ್ವರ ಅವರ ಚಪ್ಪಲಿ ನದಿಯ ಪಕ್ಕದಲ್ಲಿದ್ದುದರಿಂದ ಅನುಮಾನಗೊಂಡು ಆಶ್ರಮದ ಹಿರಿಯರಿಗೆ ತಿಳಿಸಿದರು. ಬಳಿಕ ಸ್ಥಳೀಯರು ಸೇರಿ ನದಿಯಲ್ಲಿ ಹುಡುಕಾಡಿದಾಗ ರಾತ್ರಿ ವೇಳೆ ಮೃತದೇಹ ಪತ್ತೆಯಾಗಿದೆ ಎಂದು ತಿಳಿದು ಬಂದಿದೆ. ಇನ್ನು ಈ ಬಗ್ಗೆ ಸುಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.