ಮಂಗಳೂರು, ಮಾ.08 (DaijiworldNews/MB): ಲಂಚ ಸ್ವೀಕಾರ ಆರೋಪದಲ್ಲಿ ಫೆಬ್ರವರಿ 23 ರಂದು ಬಂಧನಕ್ಕೆ ಒಳಗಾಗಿರುವ ಆರೋಪಿ ಮಂಗಳೂರು ತಾಲೂಕು ಕಛೇರಿಯಲ್ಲಿ ಭೂ ದಾಖಲೆಗಳ ಸಹಾಯಕರ ಕಛೇರಿಯಲ್ಲಿ ಸರ್ವೆಯರ್ ಆಗಿ ಕೆಲಸ ನಿರ್ವಹಿಸುತ್ತಿದ್ದ ಗಂಗಾಧರ್ ಅವರ ಜಾಮೀನು ಅರ್ಜಿಯನ್ನು ನ್ಯಾಯಾಲಯವು ವಜಾಗೊಳಿಸಿದೆ.

ಗಂಗಾಧರ್ ಅವರು ಮರ ಕಡಿಯುವ ವಿಚಾರಕ್ಕೆ ಸಂಬಂದಿಸಿದಂತೆ ಜಾಗವನ್ನು ಅಳತೆ ಮಾಡಿ ನಕಾಶೆಯನ್ನು ನೀಡುವ ವಿಚಾರವಾಗಿ ಉಳ್ಳಾಲದ ಸುಹೈಲ್ ಎಂಬವರಿಂದ ರೂ. 30,000 ಲಂಚಕ್ಕೆ ಬೇಡಿಕೆ ಇಟ್ಟಿದ್ದು ಸುಹೈಲ್ ಅವರು ಅಷ್ಟು ಹಣ ನೀಡಲಾಗದು ಎಂದು ಹೇಳಿದಾಗ ರೂ. 20,000 ನೀಡುವಂತೆ ಹೇಳಿ ರೂ. 3,500 ಮುಂಗಡವಾಗಿ ಪಡೆದಿದ್ದರು. ಉಳಿದ ಹಣ ರೂ. 16,5000 ಸ್ವೀಕಾರ ಮಾಡುತ್ತಿದ್ದ ಸಂದರ್ಭ ಸುಹೈಲ್ ಅವರು ನೀಡಿದ ದೂರಿನ ಆಧಾರದಲ್ಲಿ ಮಂಗಳೂರಿನ ಭ್ರಷ್ಟಾಚಾರ ನಿಗ್ರಹದಳದ ಅಧಿಕಾರಿಗಳು ಗಂಗಾಧರ್ ಅವರನ್ನು ರೆಡ್ ಹ್ಯಾಂಡ್ ಆಗಿದ ಬಂಧಿಸಿದ್ದರು.
ಪ್ರಸ್ತುತ ಮಂಗಳೂರಿನ ಕಾರಾಗೃಹದಲ್ಲಿ ನ್ಯಾಯಾಂಗ ಬಂಧನದಲ್ಲಿ ಗಂಗಾಧರ್ ಜಾಮೀನಿಗೆ ಅರ್ಜಿ ಸಲ್ಲಿಸಿದ್ದು ಈ ಅರ್ಜಿ ವಿಚಾರಣೆ ನಡೆಸಿದ ಮಂಗಳೂರಿನ ಮೂರನೇ ಸೆಷೆನ್ಸ್ ನ್ಯಾಯಾಲಯದ ನ್ಯಾಯಾಧೀಶ ಬಿ. ಬಿ. ಜಕಾತಿಯವರು, ಅರ್ಜಿಯನ್ನು ವಜಾಗೊಳಿಸಿದ್ದಾರೆ.
ಇನ್ನು ಭ್ರಷ್ಟಾಚಾರ ನಿಗ್ರಹದಳದ ಪರ ವಕೀಲರಾದ ವಿಶೇಷ ಸರಕಾರಿ ಅಭಿಯೋಜಕ ಕೆ. ಎಸ್.ಎನ್. ರಾಜೇಶ್ ಆರೋಪಿಗಳ ಜಾಮೀನು ಅರ್ಜಿಗೆ ಪ್ರಬಲ ಆಕ್ಷೇಪ ಸಲ್ಲಿಸಿದರು. "ಭ್ರಷ್ಟಾಚಾರದಂತಹ ಗಂಭೀರ ಪ್ರಕರಣದಲ್ಲಿ ತನಿಖೆ ಪೂರ್ಣಗೊಳ್ಳುವ ಮೊದಲು ಜಾಮೀನು ನೀಡಿದಲ್ಲಿ ಸಮಾಜಕ್ಕೆ ತಪ್ಪು ಸಂದೇಶ ರವಾನೆಯಾಗುತ್ತದೆ" ಎಂದು ವಾದಿಸಿದರು. ಈ ವಾದ, ಪ್ರತಿವಾದ ಆಲಿಸಿದ್ದ ನ್ಯಾಯಾಲಯವು ಆರೋಪಿ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ವಜಾಗೊಳಿಸಿ ಆದೇಶಿಸಿದೆ.