ಬದಿಯಡ್ಕ, ಮಾ.08 (DaijiworldNews/HR): ಪೊಲೀಸ್ ಸೋಗಿನಲ್ಲಿ ತೆರಳಿ ವ್ಯಾಪಾರ ಮಳಿಗೆ, ಗೂಡಂಗಡಿಗಳಿಂದ ಹಣ ವಸೂಲು ಮಾಡುತ್ತಿದ್ದ ಆರೋಪಿಯನ್ನು ಕುಂಬಳೆ ಪೊಲೀಸರು ಬಂಧಿಸಿದ್ದಾರೆ.

ಬಂಧಿತನನ್ನು ವಿದ್ಯಾನಗರದ ಶಶಿಧರ (34) ಎಂದು ಗುರುತಿಸಲಾಗಿದೆ.
100 ರೂ. ನಿಂದ ಎರಡು ಸಾವಿರ ರೂ. ತನಕ ಈತ ಹಣ ವಸೂಲು ಮಾಡುತ್ತಿದ್ದು, ಪೊಲೀಸ್ ಸಮವಸ್ತ್ರ ಇರುವ ತನ್ನ ಚಿತ್ರವನ್ನು ಈತ ಅಂಗಡಿ ಮಾಲಕರಿಗೆ ತೋರಿಸಿ ಬೆದರಿಸಿ ಹಣ ವಸೂಲು ಮಾಡುತ್ತಿದ್ದನು ಎನ್ನಲಾಗಿದೆ.
ಕೇರಳದಲ್ಲಿ ನಿಷೇಧಿಸಿದ ಪಾನ್ ಮಸಾಲ ಉತ್ಪನ್ನಗಳನ್ನು ಅಕ್ರಮವಾಗಿ ಮಾರಾಟ ಮಾಡುತ್ತಿದ್ದ ಗೂಡಂಗಡಿ ಹಾಗೂ ಇತರ ಅಂಗಡಿಗಳಿಗೆ ತೆರಳಿ ಬೆದರಿಸುತ್ತಿದ್ದನು ಎನ್ನಲಾಗಿದೆ.
ಈತನ ಬಗ್ಗೆ ಸಂಶಯಗೊಂಡ ಕೆಲ ವರ್ತಕರು ಬದಿಯಡ್ಕ ಪೊಲೀಸರಿಗೆ ಮಾಹಿತಿ ನೀಡಿದ್ದು, ಹಣ ವಸೂಲಿಗೆ ಮುಂದಾಗುತ್ತಿದ್ದಾಗ ಈತನನ್ನು ಬಂಧಿಸಲಾಗಿದೆ.