ಉಡುಪಿ, ಮಾ.08 (DaijiworldNews/HR): "ಗ್ರಾಮ ಪಂಚಾಯತ್ ಸದಸ್ಯರುಗಳು ಅಸಾಹಯಕರಿಗೆ ತಮ್ಮ ಸೇವೆಯಲ್ಲಿ ಮೊದಲ ಆದತ್ಯೆ ನೀಡುವಂತಾಗಬೇಕು ಈ ಮೂಲಕ ಬಡವರ ಬಾಳಿಗೆ ಬೆಳಕಾಗಬೇಕು" ಎಂದು ಉಡುಪಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಅತಿ.ವಂ. ಡಾ ಜೆರಾಲ್ಡ್ ಐಸಾಕ್ ಲೋಬೊ ಹೇಳಿದರು.






















ಅವರು ರವಿವಾರ ಉಡುಪಿ ಶೋಕಮಾತಾ ಇಗರ್ಜಿಯ ಸಭಾಂಗಣದಲ್ಲಿ ಕೆಥೊಲಿಕ್ ಸಭಾ ಉಡುಪಿ ಪ್ರದೇಶ್ ಇದರ ಆಶ್ರಯದಲ್ಲಿ ಉಡುಪಿ ಧರ್ಮಪ್ರಾಂತ್ಯದಲ್ಲಿ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಸ್ಪರ್ಧಿಸಿದ ಮತ್ತು ವಿಜೇತ ಕ್ರೈಸ್ತ ಅಭ್ಯರ್ಥಿಗಳಿಗೆ ಸನ್ಮಾನಿಸಿ ಮಾತನಾಡಿದರು.
"ಸೇವೆ ಎನ್ನುವುದು ಕ್ರೈಸ್ತ ಸಮುದಾಯದ ಪ್ರಮುಖ ಧ್ಯೇಯವಾಗಿದ್ದು, ಗ್ರಾಮ ಪಂಚಾಯತ್ ಸದಸ್ಯರಾಗುವ ಮೂಲಕ ಯೇಸು ಸ್ವಾಮಿಯ ಸೇವೆಯ ಸೈನಿಕರಾಗಲು ಒಂದು ಉತ್ತಮ ಅವಕಾಶ ಲಭಿಸಿದಂತಾಗಿದೆ. ಗ್ರಾಮ ಪಂಚಾಯತ್ ಸದಸ್ಯರಾದ ಬಳಿಕ ತಮ್ಮ ಸೇವೆ ಕೇವಲ ಒಂದು ವರ್ಗ ಅಥವಾ ಜಾತಿಗೆ ಸೀಮಿತವಾಗದೆ ಸರ್ವರಿಗೂ ಸಮಾನವಾಗಿ ನೀಡಬೇಕು. ನಮ್ಮ ಸೇವೆಗೆ ಯಾವುದೇ ಪ್ರತಿಫಲಾಪೇಕ್ಷೆ ಪಡೆಯದೆ ಮಾಡಿದಾಗ ಸಮಾಜದಲ್ಲಿ ನಮ್ಮನ್ನು ತನ್ನಿಂದ ತಾನೇ ಜನರು ಗುರುತಿಸುತ್ತಾರೆ" ಎಂದರು.
ಪಂಚಾಯತ್ ರಾಜ್ ವ್ಯವಸ್ಥೆ ಹಾಗೂ ಗ್ರಾಮ ಪಂಚಾಯತ್ ಸದಸ್ಯರುಗಳ ಕರ್ತವ್ಯದ ಬಗ್ಗೆ ಪಂಚಾಯತ್ ರಾಜ್ ಸಂಪನ್ಮೂಲ ವ್ಯಕ್ತಿ ಜನಾರ್ದನ ಮರವಂತೆ ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ನೂತನ ಗ್ರಾಮ ಪಂಚಾಯತ್ ಅಧ್ಯಕ್ಷ ಉಪಾಧ್ಯಕ್ಷರುಗಳಾಗಿ ಆಯ್ಕೆಯಾದ ಶೈನಿ ಕ್ರಾಸ್ತಾ, ಮಾರ್ಗರೇಟ್ ಸೀಮಾ, ಸಿಲ್ವೆಸ್ಟರ್ ಡಿಸೋಜಾ, ಗ್ರೇಸಿ ಕಾರ್ಡೋಜಾ, ವಿನ್ನಿಫ್ರೆಡ್ ಡಿಸೋಜಾ ಹಾಗೂ ಚುನಾವಣೆಯಲ್ಲಿ ಸ್ಪರ್ಧಿಸಿದ ಮತ್ತು ವಿಜೇತ ಕ್ರೈಸ್ತ ಅಭ್ಯರ್ಥಿಗಳನ್ನು ಗೌರವಿಸಲಾಯಿತು.
ಈ ವೇಳೆ ಉಡುಪಿ ಶೋಕ ಮಾತಾ ಇಗರ್ಜಿ ಧರ್ಮಗುರು ವಂ|ಚಾರ್ಲ್ಸ್ ಮಿನೇಜಸ್, ಕೆಥೊಲಿಕ್ ಸಭಾದ ಆಧ್ಯಾತ್ಮಿಕ ನಿರ್ದೇಶಕ ವಂ | ಫರ್ಡಿನಾಂಡ್ ಗೊನ್ಸಾಲ್ವಿಸ್, ನಿಕಟಪೂರ್ವ ಅಧ್ಯಕ್ಷ ಆಲ್ವಿನ್ ಕ್ವಾಡ್ರಸ್, ನಿಯೋಜಿತ ಅಧ್ಯಕ್ಷೆ ಮೇರಿ ಡಿಸೋಜಾ, ಉಪಾಧ್ಯಕ್ಷರಾದ ರೋನಾಲ್ಡ್ ಆಲ್ಮೇಡಾ, ಕೋಶಾಧಿಕಾರಿ ಜೆರಾಲ್ಡ್ ರೊಡ್ರಿಗಸ್ ಉಪಸ್ಥಿತರಿದ್ದರು.
ಕೆಥೊಲಿಕ್ ಸಭಾ ಉಡುಪಿ ಪ್ರದೇಶ್ ಅಧ್ಯಕ್ಷರಾದ ರೋಬರ್ಟ್ ಮಿನೇಜಸ್ ಸ್ವಾಗತಿಸಿ, ಕಾರ್ಯದರ್ಶಿ ಸಂತೋಷ್ ಕರ್ನೆಲಿಯೋ ವಂದಿಸಿದರು.