ಮಂಗಳೂರು, ಆ 09: ಕೆಲವು ಸಮಯದ ಹಿಂದೆ ಸ್ಥಗಿತಗೊಂಡಿದ್ದ ಮಂಗಳೂರು- ಮುಂಬಯಿ(ಐಸಿ1680) ಹಾಗೂ ಮುಂಬೈ-ಮಂಗಳೂರು (ಐಸಿ1679) ಏರ್ ಇಂಡಿಯಾ ವಿಮಾನ ಸಂಚಾರವನ್ನು ಅಕ್ಟೋಬರ್ 1ರಿಂದ ಪುನರಾರಂಭಿಸುವಂತೆ ಕೇಂದ್ರ ನಾಗರಿಕ ವಿಮಾನಯಾನ ಸಚಿವ ಸುರೇಶ್ ಪ್ರಭು ಅವರು ಆದೇಶಿಸಿದ್ದಾರೆ.
ವಿಮಾನ ಸಂಚಾರವನ್ನು ಪುನರಾರಂಭಿಸುವಂತೆ ಸಂಸದ ನಳಿನ್ ಕುಮಾರ್ ಕಟೀಲ್ ಅವರು ಸಚಿವ ಸುರೇಶ್ ಪ್ರಭು ಅವರನ್ನು ನವದೆಹಲಿಯಲ್ಲಿ ಭೇಟಿ ಮಾಡಿ ಮನವಿಯನು ಸಲ್ಲಿಸಿದ್ದು, ಸಚಿವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ.
ಮಂಗಳೂರು ಹಾಗೂ ಮುಂಬೈ ನಗರಗಳು ಅತ್ಯಂತ ವೇಗವಾಗಿ ಬೆಳೆಯುತ್ತಿರುವ ನಗರಗಳಾಗಿದ್ದು ಈ ನಗರಗಳಲ್ಲಿ ಅನೇಕ ಬೃಹತ್ ಉದ್ದಿಮೆಗಳು, ಸಾಫ್ಟವೇರ್ ಕಂಪನಿಗಳು ಕಾರ್ಯ ನಿರ್ವಹಿಸುತ್ತಿವೆ. ಪ್ರತಿ ದಿನ ನೂರಾರು ಪ್ರಯಾಣಿಕರು ಮಂಗಳೂರು-ಮುಂಬೈ ನಡುವೆ ಪ್ರಯಾಣಿಸುತ್ತಿದ್ದಾರೆ. ಇಲ್ಲಿನ ಉದ್ಯಮಿಗಳು, ಉದ್ಯೋಗಿಗಳು ಅಲ್ಲದೇ ದೇಶ ವಿದೇಶದ ಪ್ರವಾಸಿಗರಿಗೆ ಈ ವಿಮಾನ ಸೇವೆಯು ಅನುಕೂಲವಾಗಲಿದೆ ಎಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ.
ಇದರೊಂದಿಗೆ ಮಂಗಳೂರು- ಪುಣೆ ನಡುವೆ ಹೊಸ ವಿಮಾನ ಸೇವೆಯನ್ನು ಪ್ರಾರಂಭಿಸುವಂತೆಯೂ ಸಚಿವರನ್ನು ಕೋರಿದರು. ಈ ಹೊಸ ಸೇವೆಯನ್ನು ಪ್ರಾರಂಭಿಸಿದಲ್ಲಿ ಎರಡು ನಗರಗಳ ಸಂಪರ್ಕ ವೃದ್ದಿಯಾಗಲಿದೆ ಎಂದು ಸಂಸದರು ಮನವಿಯಲ್ಲಿ ತಿಳಿಸಿದರು.