ಸುಳ್ಯ, ಆ 09: ಸದಾ ಪೊಲೀಸ್ ಸ್ಟೇಷನ್ , ಕಾನೂನು,ತನಿಖೆ ಎಂದು ಓಡಾಡುವ ಪೊಲೀಸ್ ಠಾಣೆಯ ಎಸ್ ಐ ಒಬ್ಬರು ಕೈಯಲ್ಲಿ ಹಾರೆ ಹಿಡಿದು ರಸ್ತೆಯಲ್ಲಿದ್ದ ಹೊಂಡ ಮುಚ್ಚಿ ಸಾರ್ವಜನಿಕರ ಪ್ರಶಂಸೆಗೆ ಪಾತ್ರರಾಗಿರುವ ಅಪರೂಪದ ಘಟನೆ ಸುಳ್ಯದಲಿ ನಡೆದಿದೆ.
ಮಾಣಿ - ಮೈಸೂರು ರಸ್ತೆಯ ಪೆರಾಜೆ ಬಳಿ ಸುಳ್ಯ ಠಾಣಾ ಎಸ್.ಐ ಅವರು ಖುದ್ದಾಗಿ ಹೊಂಡ ಮುಚ್ಚುವ ಸಾಮಾಗ್ರಿಗಳನ್ನು ಕೊಂಡು ಹೋಗಿ ಸ್ವತಃ ಹಾರೆ ಹಿಡಿದು ಹೊಂಡ ಮುಚ್ಚಿದ್ದಾರೆ. ಅವರು ಕೆಲಸ ಮಾಡುತ್ತಿರುವ ದೃಶ್ಯವನ್ನು ಸಾರ್ವಜನಿಕರು ಸೆರೆ ಹಿಡಿದಿದ್ದು, ಸಾಮಾಜಿಕ ಜಾಲತಾಣದಲ್ಲಿ ಇದೀಗ ವೈರಲ್ ಆಗಿದೆ. ಕಳೆದ ಹಲವು ದಿನಗಳಿಂದ ಮಾಣಿ -ಮೈಸೂರು ಹೆದ್ದಾರಿಯ ಪೆರಾಜೆಯಲ್ಲಿ ರಸ್ತೆ ಮಧ್ಯ ಭಾಗದಲ್ಲಿ ಹೊಂಡವೊಂದು ವಾಹನ ಸಂಚಾರಕ್ಕೆ ಅಪಾಯಕಾರಿ ಆಗಿ ಪರಿಣಮಿಸಿತ್ತು. ಪ್ರಯಾಣಿಕರು ಈ ಬಗ್ಗೆ ಅಳಲು ತೋಡಿಕೊಂಡಿದ್ದರು.
ವಾಹನ ಸವಾರರಿಗೆ ತೊಂದರೆ ಆಗುತ್ತಿರುವ ಬಗ್ಗೆ ಮಾಹಿತಿ ಪಡೆದ ಎಸ್ ಐ ಮಂಜುನಾಥ್ ಅವರು ತಾವೇ ಹೊಂಡ ಮುಚ್ಚಲು ಬೇಕಾದ ಸಿಮೆಂಟ್ , ಇತರ ಸಾಮಾಗ್ರಿ , ಹಾರೆ ಪಿಕ್ಕಾಸು ಹಿಡಿದುಕೊಂಡು ಸ್ಥಳಕ್ಕೆ ತೆರಳಿದರು. ಪೊಲೀಸ್ ಜೀಪು ಚಾಲಕರ ಜತೆಗೂಡಿ ರಸ್ತೆ ಬದಿಯಲ್ಲಿ ಸ್ವತಃ ಹಾರೆ ಹಿಡಿದು ಹೊಂಡ ಮುಚ್ಚುವ ಕೆಲಸ ಕಂಡು ಸಾರ್ವಜನಿಕರು ಆಶ್ಚರ್ಯಚಕಿತರಾದರು. ಇದನ್ನು ಕಂಡ ಒಂದಿಬ್ಬರು ಅವರ ಈ ಕೆಲಸಕ್ಕೆ ಸಹಾಯ ಮಾಡಿದರು. ಎಸ್ ಐ ಅವರ ಸಾಮಾಜಿಕ ಸ್ಪಂದನೆಗೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.