ಬೆಳ್ತಂಗಡಿ, ಮಾ.09 (DaijiworldNews/PY): ಧರ್ಮಸ್ಥಳದಲ್ಲಿರುವ ಮಂಜೂಷಾ ವಾಹನ ಸಂಗ್ರಹಾಲಯಕ್ಕೆ ಮುಂಬೈನಲ್ಲಿರುವ ಭಕ್ತರು ಸಂಗ್ರಹಿಸಿ ಕಳುಹಿಸಿದ ಎರಡು ಡಬ್ಬಲ್ ಡೆಕ್ಕರ್ ಬಸ್ಗಳು ಸೇರ್ಪಡೆಯಾಗಲಿದ್ದು, ಮಂಜೂಷಾ ವಾಹನ ಸಂಗ್ರಹಾಲಯದ ಕಳೆ ಮತ್ತಷ್ಟು ಹೆಚ್ಚಲಿದೆ.

ಮುಂಬೈಯಿಂದ ಧರ್ಮಸ್ಥಕ್ಕೆ ಖಾಸಗಿ ಸಂಸ್ಥೆಯವರು ಡಬಲ್ ಡೆಕ್ಕರ್ ಬಸ್ಗಳ ಸಾಗಾಟವನ್ನು ಉಚಿತವಾಗಿ ಮಾಡಿಕೊಟ್ಟಿದ್ದು, ಧರ್ಮಾಧಿಕಾರಿ ಡಾ.ಡಿ.ವಿರೇಂದ್ರ ಹೆಗ್ಗಡೆ ಅವರ ಮಾರ್ಗದರ್ಶನದಂತೆ ಎರಡು ಡಬಲ್ ಡೆಕ್ಕರ್ ಬಸ್ಗಳ ಚಾಲನಾ ಸುಸ್ಥಿತಿಗೆ ತಂದು ಮಂಜೂಷಾ ಸಂಗ್ರಹಾಲಯದಲ್ಲಿ ಇರಿಸುವ ಕಾರ್ಯ ನಡೆದಿದೆ.
ಎರಡು ಬಸ್ಗಳ ಪೈಕಿ ನೀಲಿ ಬಣ್ಣದ ಬಸ್ ಮುಂಬೈನಲ್ಲಿ ಪ್ರವಾಸಿಗರನ್ನು ಹೊತ್ತೊಯ್ದು, ವಿವಿಧ ಪ್ರವಾಸಿ ತಾಣಗಳನ್ನು ತೋರಿಸುತ್ತಿದ್ದ ಟೂರಿಸ್ಟ್ ಬಸ್ ಆಗಿದೆ. ಕೆಂಪು ಬಣ್ಣದ ಬಸ್ ಸ್ಥಳೀಯ ಸಾರ್ವಜನಿಕರನ್ನು ಕೊಂಡೊಯ್ಯುತ್ತಿದ್ದ ಸಾರಿಗೆ ಬಸ್ ಆಗಿದೆ.
ಮಂಜೂಷಾ ಸಂಗ್ರಹಾಲಯದಲ್ಲಿ, ಮಹಾತ್ಮ ಗಾಂಧೀಜಿ ಅವರು ಕರ್ನಾಟಕ ಪ್ರವಾಸ ವೇಳೆ ಬಳಸಿದ್ದ ಕಾರು, ಡ್ಯಾಮ್ಲರ್ ಸಂಸ್ಥೆಯ ಮೈಸೂರು ಮಹಾರಾಜರು ಬಳಸುತ್ತಿದ್ದ ವಿಕ್ಟೋರಿಯಾ ರಾಣಿಯ ವಿಶೇಷ ನವೀಕೃತ ಕಾರು, ಲಿಮೋಸಿನ್, ರೋಲ್ಸ್ ರಾಯ್ಸ್ ಮೊದಲಾದ ವಿವಿಧ ರಾಷ್ಟ್ರಗಳ, ವಿವಿಧ ವಿಶೇಷತೆಗಳನ್ನು ಹೊಂದಿರುವ ಕಾರುಗಳಿವೆ. ಇಲ್ಲಿ ಪ್ರಾಚೀನ ವಸ್ತುಗಳು ಸೇರಿದಂತೆ, ಕಲಾಚಿತ್ರಗಳು, ವರ್ಣ ಚಿತ್ರಗಳು, ದೇವಾಲಯದ ರಥಗಳು ಹಾಗೂ ಸುಮಾರು 8,000 ಕಲಾಕೃತಿಗಳಿವೆ.