ಉಡುಪಿ, ಮಾ10 (DaijiworldNews/MS):ಮಂಗಳವಾರ ಸಂಜೆ ಬ್ರಹ್ಮಾವರದ ಹೇರೂರು ಬಳಿ ಮೀನಿನ ಲಾರಿ ಮಗುಚಿ ಸಂಭವಿಸಿದ ಅಪಘಾತದಲ್ಲಿ ಖಾಸಗಿ ಬಸ್ ಸಿಬ್ಬಂದಿಗಳು ಮಾನವೀಯತೆ ಮೆರೆದಿದ್ದಾರೆ.

ಖಾಸಗಿ ಬಸ್ ಸಿಬ್ಬಂದಿಗಳು
ಮಗುಚಿಬಿದ್ದ ಮೀನಿನ ಲಾರಿ
ಕುಂದಾಪುರ ದಿಂದ ಉಡುಪಿಗೆ ಬರುತಿದ್ದ ಎಕೆಎಂಸ್ ಬಸ್ ಸಿಬ್ಬಂದಿಗಳ ಮಾನವೀಯತೆಗೆ ಇದೀಗ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ. ಎಕೆಎಂಎಸ್ ಬಸ್ಸು ಹೇರೂರು ಬಳಿ ತಲುಪುವಾಗ ಮೀನಿನ ಲಾರಿ ಮಗುಚಿ ಬಿದ್ದು ಲಾರಿ ಚಾಲಕನಿಗೆ ತೀವ್ರತರದ ಗಾಯಗಳಾಗಿದ್ದವು. ಈ ಘಟನೆಯನ್ನು ಗಮನಿಸಿದ ಬಸ್ ಚಾಲಕ ರಾದ ಸಂತೋಷ ಗಟ್ಟಿ ಮತ್ತು ನಿರ್ವಾಹಕ ಅಲ್ತಾಫ್ ತಕ್ಷಣವೇ ಬಸ್ಸನ್ನು ನಿಲ್ಲಿಸಿ ಸಾರ್ವಜನಿಕರು ಮತ್ತು ಪ್ರಯಾಣಿಕರ ಸಹಕಾರದೊಂದಿಗೆ ಗಾಯಾಳು ಲಾರಿ ಚಾಲಕನನ್ನು ತಮ್ಮ ಬಸ್ಸಿನಲ್ಲಿ ಕರೆದುಕೊಂಡು ಬಂದು ಉಡುಪಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಈ ಕುರಿತು ದಾಯ್ಜಿವಲ್ಡ್ ಮಾಧ್ಯಮದೊಂದಿಗೆ ಮಾತನಾಡಿದ ಸಂತೋಷ್ ಗಟ್ಟಿ ಇವರು "ನಿರ್ವಾಹಕ ಮತ್ತು ಪ್ರಯಾಣಿಕರ ಸಹಕಾರದಿಂದ ನಾವು ಗಾಯಾಳು ಚಾಲಕನ್ನು ಉಡುಪಿಯ ಆಸ್ಪತ್ರೆಗೆ ಸೇರಿಸಿದೆವು. ಆಸ್ಪತ್ರೆಯವರು ಮೊದಲಿಗೆ ನಾವು ರೋಗಿಯೊಡನೆ ಅಸ್ಪತ್ರೆಯಲ್ಲಿ ಇರಬೇಕು ಎಂದು ಕೇಳಿಕೊಂಡಿದ್ದರು ಆದರೆ ನಾವು ಮತ್ತೆ ಮಂಗಳೂರಿಗೆ ಬಸ್ ರೂಟ್ ನಲ್ಲಿ ಕೊಂಡೊಯ್ಯಬೇಕಿದ್ದ ಕಾರಣ ಮತ್ತು ಪ್ರಯಾಣಿಕರು ಕೂಡಾ ಬಸ್ಸಿನಲ್ಲಿ ಇದ್ದ ಕಾರಣ ಆಸ್ಪತ್ರೆಯ ವರಿಗೆ ಪರಿಸ್ಥಿತಿಯನ್ನು ಅರ್ಥ ಮಾಡಿಸಿ ಮಂಗಳೂರಿಗೆ ಪ್ರಯಾಣಿಸಿದ್ದೆವು" ಎಂದರು
ಇದಲ್ಲದೇ ಚಾಲಕ ಸಂತೋಷ್ ಅವರು ಗಾಯಾಳುವನ್ನು ಶೀಘ್ರವಾಗಿ ಆಸ್ಪತ್ರೆಗೆ ಸೇರಿಸುವ ದೃಷ್ಟಿಯಿಂದ ಹೇರೂರಿನಿಂದ ಉಡುಪಿಯ ಸುಮಾರು 10 ಕಿಲೋ ಮೀಟರ್ ದೂರವನ್ನು 6 ನಿಮಿಷಗಳ ಲ್ಲಿ ಕ್ರಮಿಸಿದ್ದಾರೆ ಮಾತ್ರವಲ್ಲದೇ ತಮ್ಮ ಸ್ನೇಹಿತರ ಸಹಕಾರದಿಂದ ಮೀನಿನ ಲಾರಿಯ ಮಾಲಕರನ್ನು ಕೂಡಾ ಸಂಪರ್ಕಿಸಿ ವಿಷಯ ವನ್ನು ಮಾಲಕರ ಗಮನಕ್ಕೂ ತಂದಿರುತ್ತಾರೆ.