ಪುತ್ತೂರು, ಮಾ.10 (DaijiworldNews/PY): ಕೆಎಸ್ಆರ್ಟಿಸಿ ಪುತ್ತೂರು ಘಟಕದಲ್ಲಿ ಮೇಲ್ವಿಚಾರಕರಾಗಿ ನಿವೃತ್ತರಾಗಿರುವ ಅಬ್ದುಲ್ ಅಜೀಜ್ ಅವರ ಮೇಲೆ ಕರ್ತವ್ಯದ ಸಂದರ್ಭ ಸುಳ್ಳು ಆರೋಪ ಹೊರಿಸಿ ದೂರ ನೀಡಿರುವ ಆರೋಪದ ಹಿನ್ನೆಲೆ ಪುತ್ತೂರು ನ್ಯಾಯಾಲಯದಲ್ಲಿ ಹಿಂದಿನ ವಿಭಾಗೀಯ ನಿಯಂತ್ರಣಾಧಿಕಾರಿ ಸೇರಿ ಮೂವರ ವಿರುದ್ದ ಮಾನನಷ್ಟ ಕೇಸು ದಾಖಲಾಗಿದ್ದು, ಖುದ್ದಾಗಿ ನ್ಯಾಯಾಲಯಕ್ಕೆ ಹಾಜರಾಗುವಂತೆ ಸಮನ್ಸ್ ಜಾರಿ ಮಾಡಲಾಗಿದೆ.

"ನಾಗರಾಜ ಲಕ್ಷ್ಮಣ ಶಿರಾಲಿ ಅವರು 2017ರಲ್ಲಿ ಪುತ್ತೂರು ವಿಭಾಗದ ಕೆಎಸ್ಆರ್ಟಿಸಿಯಲ್ಲಿ ಡಿಸಿಯಾಗಿದ್ದ ಸಮಯದಲ್ಲಿ, ಘಟಕದಲ್ಲಿ ಮೇಲ್ವಿಚಾರಕರಾಗಿದ್ದ ತನ್ನ ವಿರುದ್ದ ಸಿಬ್ಬಂದಿ ರಶ್ಮಿ ಹಾಗೂ ಕಿರಿಯ ಸಹಾಯಕಿ ಮಮತಾ ಅವರ ಮುಖೇನ ಕಿರುಕುಳದ ನೆಪವೊಡ್ಡಿ ಸುಳ್ಳು ದೂರು ಬರೆಸಿಕೊಂಡಿದ್ದರು. ಆದರೆ, ಈ ಬಗ್ಗೆ ವಿಚಾರಣೆ ಮಾಡದೇ ಏಕಪಕ್ಷೀಯವಾಗಿ ಕೇಂದ್ರ ಕಛೇರಿಯ ಮೂಲಕ ಒತ್ತಡ ತಂದು ನನ್ನನ್ನು ಕಲಬುರ್ಗಿಗೆ ವರ್ಗಾಯಿಸಿದ್ದರು. ನಾನು ಈ ವಿಚಾರದ ಬಗ್ಗೆ ಕೇಂದ್ರ ಕಛೇರಿಯಲ್ಲಿ ಇಲಾಖಾ ತನಿಖೆಯನ್ನು ಎದುರಿಸಿದ್ದೆ. ತನಿಖೆಯ ಸಂದರ್ಭ ದೂರುದಾರರು ಹಾಜರಾಗದೇ ಇದ್ದ ಕಾರಣ ವಿಚಾರಣಾಧಿಕಾರಿಯಾಗಿದ್ದ ನಿವೃತ್ತ ಜಿಲ್ಲಾ ನ್ಯಾಯಾಧೀಶ ತಮ್ಮಯ್ಯ ಅವರು ನನ್ನನ್ನು ನಿರಪರಾಧಿ ಎಂದು ಆದೇಶ ನೀಡಿದ್ದರು" ಎಂದು ಅಜೀಜ್ ತಿಳಿಸಿದ್ದಾರೆ.
ವೈಯುಕ್ತಿಕ ದ್ವೇಷದ ಕಾರಣದಿಂದ ನಾಗರಾಜ ಶಿರಾಲಿ ಅವರು ವರ್ಗಾವಣೆ ಮಾಡಿದ್ದಾರೆ ಎಂದು ಅಜೀಜ್ ಅವರು ವರ್ಗಾವಣೆ ಆದೇಶದ ವಿರುದ್ದ ಉಚ್ಛ ನ್ಯಾಯಾಲಯದಲ್ಲಿ ದಾವೆ ಹೂಡಿದ್ದರು. ವರ್ಗಾವಣೆ ಆದೇಶವನ್ನು ರದ್ದು ಮಾಡಿದ ಉಚ್ಛ ನ್ಯಾಯಾಲಯವು, ತಕ್ಷಣವೇ ಪುತ್ತೂರಿನಲ್ಲಿ ಕರ್ತವ್ಯಕ್ಕೆ ಹಾಜರಾಗಬೇಕು ಎಂದು ಅಜೀಜ್ ಅವರಿಗೆ ಆದೇಶ ನೀಡಿತ್ತು. ಆದೇಶದಂತೆ ಅಜೀಜ್ ಅವರು ಪುತ್ತೂರಿನಲ್ಲಿ ಕರ್ತವ್ಯಕ್ಕೆ ಹಾಜರಾಗಿದ್ದು, ಸದ್ಯ ನಿವೃತ್ತಿ ಹೊಂದಿದ್ದಾರೆ.
ತನ್ನ ವಿರುದ್ದವಾಗಿ ಸುಳ್ಳು ದೂರು ನೀಡಿದ ದೂರುದಾರರ ಮೇಲೆ ಕ್ರಮ ತೆಗೆದುಕೊಳ್ಳಬೇಕು ಎಂದು ಅಜೀಜ್ ಅವರು ಪುತ್ತೂರು ನ್ಯಾಯಾಲಯದಲ್ಲಿ ಮಾನನಷ್ಟ ಮೊಕದ್ದಮೆ ಹಾಗೂ ಕ್ರಿಮಿನಲ್ ಕೇಸ್ ದಾಖಲಿಸಿದ್ದಾರೆ. ದೂರನ್ನು ವಿಚಾರಣೆಗೆ ಸ್ವೀಕರಿಸಿದ ನ್ಯಾಯಾಲಯವು, ದೂರುದಾರರು ಮಾರ್ಚ್ 12ರಂದು ಖುದ್ದಾಗಿ ನ್ಯಾಯಾಲಯಕ್ಕೆ ಹಾಜರಾಗುವಂತೆ ಸಮನ್ಸ್ ಜಾರಿ ಮಾಡಿದೆ.