ಮಂಗಳೂರು, ಆ 09: ಗೋಕಳ್ಳರ ಕೈ ಸೇರಿ ಎರಡು ಕಾಲುಗಳನ್ನು ಕಳೆದುಕೊಂಡು, ಕಟುಕರ ಕೈಯಿಂದ ತಪ್ಪಿಸಿಕೊಂಡಿದ್ದ ಬಡಪಾಯಿ ದನವೊಂದು ಕರುವಿಗೆ ಜನ್ಮ ನೀಡಿ ಅಸುನೀಗಿದ ಘಟನೆ ಮಂಗಳೂರು ಸಮೀಪದ ಶಕ್ತಿನಗರದಲ್ಲಿ ನಡೆದಿದೆ.
ಕಳೆದ ಮೂರು ತಿಂಗಳ ಹಿಂದೆ ಗುರುಪುರದಲ್ಲಿ 10 ವರ್ಷ ಪ್ರಾಯದ, 6 ತಿಂಗಳ ಗರ್ಭ ಧರಿಸಿದ್ದ ದನವೊಂದು ಕಟುಕರು ಬೀಸಿದ ಕತ್ತಿಯಿಂದ ತಪ್ಪಿಸಿ ಗಾಯಗೊಂಡ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಕಟುಕರು ದನ ವಾಹನದಿಂದ ತಪ್ಪಿಸದಂತೆ ದನದ 2 ಕಾಲುಗಳನ್ನು ಕಡಿದು ಹಾಕಿದ್ದರು. ಆದರೆ ಈ ದನ ಗೋಕಳ್ಳರ ಕೈಯಿಂದ ತಪ್ಪಿಸಿ ವಾಹನದಿಂದ ಕೆಳಗೆ ಹಾರಿ ಗುರುಪುರ ಸಮೀಪದ ರಸ್ತೆಯಲ್ಲಿ ಬಿದ್ದಿತ್ತು.
ಈ ಬಗ್ಗೆ ಮಾಹಿತಿ ಪಡೆದುಕೊಂಡ ಶಕ್ತಿನಗರದಲ್ಲಿರುವ ಅನಿಮಲ್ ಕೇರ್ ಟ್ರಸ್ಟ್ ಸದಸ್ಯರು ಈ ದನವನ್ನು ತಂದು, ರಾಧಾ ಎಂಬ ಹೆಸರಿಟ್ಟು, ದನವನ್ನು ಆರೈಕೆ ಮಾಡಿ 3 ತಿಂಗಳಿನಿಂದ ಸಾಕಿದ್ದರು. ಜೊತೆಗೆ ವೈದ್ಯರ ನೆರವು ಪಡೆದುಕೊಂಡು ದನದ ಕಾಲಿಗೆ ಶಸ್ತ್ರಚಿಕಿತ್ಸೆಯನ್ನು ಕೂಡ ಮಾಡಿಸಿದ್ದರು. ಆದರೆ ತನ್ನೆರಡೂ ಕಾಲುಗಳನ್ನು ಕಳೆದುಕೊಂಡು ತೀವ್ರ ಬಳಲಿದ್ದ ದನ ಕರುವೊಂದಕ್ಕೆ ಜನ್ಮ ನೀಡಿ ಸಾವನ್ನಪ್ಪಿದೆ.
ಅನಿಮಲ್ ಕೇರ್ ಟ್ರಸ್ಟ್ ಸದಸ್ಯರು ಕರುವಿಗೆ ಚೋಟಾ ಭೀಮ್ ಎಂದು ಹೆಸರಿಟ್ಟು, ತಬ್ಬಲಿ ಕರುವಿನ ಆರೈಕೆ ಮಾಡುತ್ತಿದ್ದಾರೆ. ಬಾಟಲಿಯಲ್ಲಿ ಹಾಲೂಣಿಸಿ ಕರುವನ್ನು ಸಾಕಿ ಸಲಹುತ್ತಿದ್ದಾರೆ.
ಇದೀಗ ಶಕ್ತಿನಗರದ ಅನಿಮಲ್ ಕೇರ್ ಟ್ರಸ್ಟ್ ಗೋಮಾತೆಯ ಮೇಲೆ ತೋರಿದ ಕಾಳಜಿ ಎಲ್ಲರನ್ನೂ ಮೂಕವಿಸ್ಮಿತರನ್ನಾಗಿಸಿದೆ. ಮಾತ್ರವಲ್ಲ, ಪ್ರಶಂಸೆ ಕೂಡ ವ್ಯಕ್ತವಾಗಿದೆ.