ಉಳ್ಳಾಲ, ಮಾ.10 (DaijiworldNews/MB) : ಯುವತಿಯೋರ್ವಳು ನೇಣುಬಿಗಿದ ಸ್ಥಿತಿಯಲ್ಲಿ ಮನೆಯೊಳಗೆ ಪತ್ತೆಯಾಗಿರುವ ಘಟನೆ ಕುಂಪಲ ಆಶ್ರಯಕಾಲನಿಯಲ್ಲಿ ನಡೆದಿದೆ.




ಚಿತ್ತಪ್ರಸಾದ್ ಎಂಬವರ ಪುತ್ರಿ ಪ್ರೇಕ್ಷಾ(20) ಶವವಾಗಿ ಪತ್ತೆಯಾದಾಕೆ.
ಮಂಗಳೂರಿನ ಖಾಸಗಿ ಕಾಲೇಜೊಂದರಲ್ಲಿ ವಿದ್ಯಾರ್ಥಿನಿಯಾಗಿದ್ದ ಈಕೆ ರಜೆ ಪಡೆದುಕೊಂಡು ಮನೆಯಲ್ಲೇ ಉಳಿದಿದ್ದಳು.
ತಾಯಿ ಅಂಗನವಾಡಿ ಕೆಲಸಕ್ಕೆ ಹೋಗಿದ್ದು, ಪ್ರೇಕ್ಷಾ ಮನೆಯಲ್ಲಿ ಒಬ್ಬಳೇ ಇದ್ದಳು. ಮಧ್ಯಾಹ್ನ ವೇಳೆ ತಾಯಿ ಊಟಕ್ಕೆಂದು ಮನೆಗೆ ಬಂದ ಸಂದರ್ಭ ಮನೆಯೊಳಗಿನ ಕೋಣೆಯೊಳಗೆ ಪ್ರೇಕ್ಷಾ ಮೃತದೇಹ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಸ್ಥಳೀಯರು ಕೊಲೆಶಂಕೆಯನ್ನು ವ್ಯಕ್ತಪಡಿಸಿದ್ದಾರೆ. ಪ್ರೇಕ್ಷಾ ಒಬ್ಬಂಟಿಯಾಗಿರುವಾಗ ಮೂರು ಜನರು ಮನೆಗೆ ಭೇಟಿ ನೀಡಿದ್ದರು ಎಂದು ಸ್ಥಳೀಯರು ಹೇಳಿದ್ದಾರೆ. ಮೂಲಗಳ ಪ್ರಕಾರ, ಪ್ರೇಕ್ಷಾ ಪೋಟೋಶೂಟ್ಗಾಗಿ ಬುಧವಾರ ರಾತ್ರಿ ಬೆಂಗಳೂರಿಗೆ ತೆರಳಬೇಕಿತ್ತು. ಇದನ್ನು ಪ್ರೇಕ್ಷಾಳ ಮನೆಗೆ ಬಂದ ಮೂವರ ಪೈಕಿ ಓರ್ವ ವ್ಯಕ್ತಿ ವಿರೋಧಿಸಿದ್ದರು. ಇದೇ ವಿಷಯಕ್ಕೆ ಸಂಬಂಧಿಸಿದಂತೆ ಕೊಲೆ ನಡೆದಿರಬೇಕು ಎಂದು ಸ್ಥಳೀಯರು ಶಂಕಿಸಿದ್ದಾರೆ.
ಘಟನಾ ಸ್ಥಳಕ್ಕೆ ಉಳ್ಳಾಲ ಠಾಣಾ ಪೊಲೀಸರು ಭೇಟಿ ನೀಡಿದ್ದು, ತನಿಖೆ ನಡೆಸುತ್ತಿದ್ದಾರೆ.