ಮಂಗಳೂರು, ಆ 09: ಕುದುರೆಮುಖ ಸುತ್ತಮುತ್ತ ಪ್ರವಾಸಕ್ಕೆಂದು ತೆರಳಿದ್ದ ಮಂಗಳೂರಿನ 13 ಮಂದಿಯ ತಂಡದಲ್ಲಿದ್ದ ಯುವಕನೋರ್ವ ಜು.26 ರಂದು ಭದ್ರಾ ನದಿಯಲ್ಲಿ ಬಿದ್ದು ನಾಪತ್ತೆಯಾಗಿದ್ದು, ಆತನ ಮೃತದೇಹ ಘಟನೆ ನಡೆದು ಸುಮಾರು 12 ದಿನಗಳ ಬಳಿಕ ಪತ್ತೆಯಾಗಿದೆ.
ಎನ್. ಆರ್ ಪುರದ ಮಾಗುಂಡಿ ಎಂಬಲ್ಲಿ ಕಿರಣ್ ಕೊಟ್ಯಾನ್ (26) ಶವ ಪತ್ತೆಯಾಗಿದೆ ಎಂದು ತಿಳಿದುಬಂದಿದ್ದು, ಮೃತದೇಹವನ್ನು ಸ್ಥಳೀಯ ಪೊಲೀಸರ ಸಮ್ಮುಖದಲ್ಲಿ ಗ್ರಾಮಸ್ಥರು ನದಿಯಿಂದ ಹೊರತೆಗೆದಿದ್ದಾರೆ. 12 ದಿನಗಳಿಂದ ಮೃತದೇಹ ನೀರಿನಲ್ಲಿದ್ದ ಪರಿಣಾಮ ಗುರುತು ಸಿಗದಂತಾಗಿದೆ. ಮಂಗಳೂರಿನ ತುಂಬೆ ನಿವಾಸಿಯಾಗಿದ್ದ ಕಿರಣ್ ಮಂಗಳೂರಿನ ಖಾಸಗಿ ಕಂಪನಿಯಲ್ಲಿ ಇಂಜಿನಿಯರ್ ಆಗಿ ಕೆಲಸ ನಿರ್ವಹಿಸುತ್ತಿದ್ದರು. ಇವರು ಜು .26 ರಂದು ತನ್ನ 13 ಮಂದಿಯ ಸ್ನೇಹಿತರೊಂದಿಗೆ ಕಳಸ ಕುದುರೆಮುಖ ಪ್ರವಾಸಕ್ಕೆ ತೆರಳಿದ್ದರು. ಮೂಡಿಗೆರೆ ತಾಲೂಕಿನ ಕಳಸ ಸಮೀಪದ ಅಂಬುತೀರ್ಥಕ್ಕೆ ಭೇಟಿ ಕೊಟ್ಟ ಸಂದರ್ಭದಲ್ಲಿ ತುಂಬಿ ಹರಿಯುತ್ತಿದ್ದ ಭದ್ರಾ ನದಿಗೆ ಕಾಲು ಜಾರಿ ಬಿದ್ದಿದ್ದರು.
ಘಟನೆ ಬಳಿಕ ಕಳಸ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆಗ್ನಿಶಾಮಕ ದಳ ಹಾಗೂ ಪೊಲೀಸರು ಕಿರಣ್ ಗಾಗಿ ಸುಮಾರು 10 ದಿನಗಳಿಂದ ಹುಡುಕಾಡಿದ್ದಾರೆ. ಎನ್ ಡಿ ಆರ್ ಎಫ್ ತಂಡ ಹಾಗೂ ಬಂಟ್ವಾಳದ ಮುಳುಗು ತಜ್ಞರು ನದಿಯಲ್ಲಿ ಶೋಧ ನಡೆಸಿದರೂ ಕಿರಣ್ ಪತ್ತೆಯಾಗಿರಲಿಲ್ಲ. 10 ದಿನಗಳ ಬಳಿಕ ಶೋಧ ಕಾರ್ಯವನ್ನು ಕೈ ಬಿಡಲಾಗಿತ್ತು. ಇದೀಗ 12 ದಿನಗಳ ಬಳಿಕ ಮೃತದೇಹ ಪತ್ತೆಯಾಗಿದೆ.