ಹುಬ್ಬಳ್ಳಿ, ಆ10: ನಮ್ಮ ದೇಶ ಭಾರತದಲ್ಲಿ ಧರ್ಮಕ್ಕೆ ಮೊದಲ ಸ್ಥಾನ, ನಂತರ ಅಭಿವೃದ್ದಿಗೆ ಪ್ರಾಶಸ್ತ್ಯ ಕೊಡುತ್ತಾರೆ ಎಂದು ನಗರಾಭಿವೃದ್ದಿ ಸಚಿವ ಯುಟಿ ಖಾದರ್ ಅಸಹಾಯಕತೆಯನ್ನು ವ್ಯಕ್ತಪಡಿಸಿದ್ದಾರೆ.
ಧಾರ್ಮಿಕ ಕೇಂದ್ರಗಳ ಸ್ಥಳಾಂತರ ತೀವ್ರ ವಿಳಂಬವಾಗುತ್ತಿರುವ ಹಿನ್ನೆಲೆಯಲ್ಲಿ ಮಾತನಾಡಿದ ಅವರು, ಭಾರತದಲ್ಲಿ ಧರ್ಮವೇ ಮೊದಲ ಪ್ರಾಶಸ್ತ್ಯ ಪಡೆದಿದ್ದು ಅಭಿವೃದ್ದಿ ನಂತರದ ಸ್ಥಾನದಲ್ಲಿದೆ. ಹೀಗಾಗಿ ಯಾವ ಅಭಿವೃದ್ದಿ ಯೋಜನೆಗಾಗಿಯೂ ಧಾರ್ಮಿಕ ಕೇಂದ್ರಗಳ ಸ್ಥಳಾಂತವಾಗುವುದು ಇಲ್ಲಿ ಅಸಾಧ್ಯವಾಗಿದೆ. ಹುಬ್ಬಳ್ಳಿ ಮತ್ತು ಧಾರವಾಡ ನಡುವೆ ಬಸ್ ರಾಪಿಡ್ ಟ್ರಾನ್ಸಿಟ್ ಸಿಸ್ಟಮ್ ಕಾರಿಡಾರ್ ಅಭಿವೃದ್ಧಿಪಡಿಸುವ ಸಂಬಂಧ ಧಾರ್ಮಿಕ ಕೇಂದ್ರಗಳನ್ನು ಸ್ಥಳಾಂತರಿಸಲು ಸಾಧ್ಯವಾಗಿಲ್ಲ ಎಂದು ತಿಳಿಸಿದರು.
ಹುಬ್ಬಳ್ಳಿ - ಧಾರವಾಡದ ನಡುವಿನ ಬಿಆರ್ಟಿಎಸ್ ಕಾರಿಡಾರ್ ನಡುವೆ ಸುಮಾರು 18 ಧಾರ್ಮಿಕ ಕೇಂದ್ರಗಳು ಬರುತ್ತದೆ. ಇದರಲ್ಲಿ ಉಂಕಲ್ನಲ್ಲಿನ ದೇವಸ್ಥಾನ ಹಾಗು ಭೈರಿದೇವರಕೊಪ್ಪದಲ್ಲಿನ ಒಂದು ದರ್ಗಾ ಹೊರತುಪಡಿಸಿ ಉಳಿದೆಲ್ಲವನ್ನೂ ಸ್ಥಳಾಂತರಿಸಲಾಗಿದೆ. ಸ್ಥಳೀಯರಿಗೆ ಇದು ಧಾರ್ಮಿಕ ಸೂಕ್ಷ್ಮ ವಿಚಾರವಾಗಿದ್ದು, ದರ್ಗಾವನ್ನು ತೆರವುಗೊಳಿಸದೆ ದೇವಸ್ಥಾನವನ್ನು ಮುತ್ಟಲು ಅವಕಾಶವಿಲ್ಲ ಎಂದು ಹೇಳುತ್ತಿದ್ದಾರೆ.
ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುವಾಗ ನಮ್ಮಲ್ಲಿ ಮಾತ್ರವಲ್ಲ ದೇಶದ ಎಲ್ಲೆಡೆಗಳಲ್ಲಿ ಇಂತಹ ಸಮಸ್ಯೆಗಳು ಉದ್ಭವವಾಗುತ್ತದೆ. ಈ ವಿಷಯವನ್ನು ಸ್ಥಳೀಯ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ನಿರ್ವಹಿಸಬೇಕು. ಅಂತಹ ಸೂಕ್ಷ್ಮ ವಿಷಯಗಳ ಕುರಿತು ಸರ್ಕಾರವನ್ನು ಒತ್ತಾಯಿಸಬಾರದು. ನಮಗೆ ದೇಶದ ಅಭಿವೃದ್ಧಿ ಮುಖ್ಯ ಎಂದು ಸಚಿವರು ಹೇಳಿದ್ದಾರೆ.