ಮಂಗಳೂರು, ಆ10: ಪ್ರಧಾನಿ ನರೇಂದ್ರ ಮೋದಿ ದೇಶದ ರೈತರಿಗೆ ಶಾಶ್ವತ ಪರಿಹಾರವನ್ನು ನೀಡುವಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ ಎಂದು ಉಪ ಮುಖ್ಯಮಂತ್ರಿ ಹಾಗೂ ಗೃಹ ಸಚಿವ ಡಾ.ಜಿ. ಪರಮೇಶ್ವರ ಟೀಕೆ ಮಾಡಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಬಿಜೆಪಿ ಸರಕಾರದಲ್ಲಿ ಸಾಕಷ್ಟು ಭ್ರಷ್ಟಾಚಾರಗಳು ನಡೆದಿದ್ದು, ಕೇಂದ್ರ ಮತ್ತು ರಾಜ್ಯದ ಅಭಿವೃದ್ಧಿಗೆ ಹಿನ್ನೆಡೆಯಾಗಿದೆ. ಮುಂದಿನ ದಿನಗಳಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ ಬಂದರೆ ಸಮಸ್ಯೆ ತಪ್ಪಲ್ಲ. ಈ ದೃಷ್ಟಿಯಿಂದ ನಾವು ಸಮ್ಮಿಶ್ರ ಸರಕಾರಕ್ಕೆ ಒಲವು ತೋರಿಸಿದ್ದೇವೆ. ರೈತರ ಆತ್ಮಹತ್ಯೆ ಕಡಿಮೆಯಾಗಬೇಕು ಅನ್ನುವ ಉದ್ದೇಶದಿಂದ ಮತ್ತು ಬೆಳೆ ನಾಶದ ಹಿನ್ನೆಲೆಯಲ್ಲಿ ಸಾಲಮನ್ನಾ ಮಾಡಿದ್ದೇವೆ. ಸಾವಿರಾರು ರೈತರು ಆತ್ಮಹತ್ಯೆಗೆ ಮುಂದಾದಾಗ ನಾವು ಸ್ಪಂದಿಸಬೇಕಾಗುತ್ತದೆ. ಸುಮಾರು 12ಸಾವಿರ ರೈತರು ದೇಶದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ರೈತರ ಕುಟುಂಬದ ಸ್ಥಿತಿ ನೋಡಿ ಸಾಲಮನ್ನಾ ಮಾಡಿದ್ದೇವೆ ಎಂದು ತಿಳಿಸಿದರು.
ದೇಶದ ಪ್ರಧಾನಿ ನರೇಂದ್ರ ಮೋದಿಯವರಿಗೆ ರೈತರ ಬಗ್ಗೆ ಗಮನವಿಲ್ಲ. ಪ್ರಧಾನಿ ಅವರು ರೈತರ ಸಮಸ್ಯೆಗೆ ಶಾಶ್ವತ ಪರಿಹಾರ ನೀಡಿಲ್ಲ. ಈ ಬಗ್ಗೆ ಅವರಿಗೆ ಚಿಂತೆಯೂ ಇಲ್ಲ. ಆದರೆ ನಾವು ರೈತರ ಹೊರೆಯನ್ನು ಗಮನಕ್ಕೆ ತೆಗೆದುಕೊಂಡು ಸಾಲಮನ್ನಾ ಮಾಡಿದ್ದೇವೆ ಎಂದು ಹೇಳಿದರು.
ಈ ಹಿಂದೆ ರಾಜ್ಯದಲ್ಲಿ ಅಧಿಕಾರದಲ್ಲಿದ್ದ ಕಾಂಗ್ರೆಸ್ ಪಕ್ಷ ಕರ್ನಾಟಕದ ಜನತೆಗೆ ನೀಡಿದ ಎಲ್ಲಾ ಕಾರ್ಯಕ್ರಮಗಳನ್ನು ಮತ್ತು ಯೋಜನೆಗಳನ್ನು ಹಾಗೆಯೇ ಮುಂದುವರಿಸುತ್ತೇವೆ. ಕಾಂಗ್ರೆಸ್ ಪಕ್ಷ ನಡೆಸುತ್ತಿದ್ದ ಯಾವುದೇ ಕಾರ್ಯಕ್ರಮಗಳನ್ನು ನಿಲ್ಲಿಸುವುದಿಲ್ಲ. ಮುಂದಿನ ದಿನಗಳಲ್ಲಿ ಕೆಲ ನೂತನ ಕಾರ್ಯಕ್ರಮವನ್ನು ಸಿಎಂ ಕುಮಾರಸ್ವಾಮಿ ನೀಡಲಿದ್ದಾರೆ. ನೂತನ ಕಾರ್ಯಕ್ರಮಗಳ ಜೊತೆಗ ಹಿಂದಿನ ಕಾರ್ಯಕ್ರಮಗಳು ನಡೆಯುತ್ತದೆ ಎಂದು ಭರವಸೆ ನೀಡಿದರು.
ಕಳೆದ ಕೆಲ ತಿಂಗಳ ಹಿಂದೆ ಮಂಡಿಸಲಾಗಿದ್ದ ಬಜೆಟ್ನಲ್ಲಿ ಅಲ್ಪಸಂಖ್ಯಾತರಿಗೆ ಅನುದಾನ ಕಡಿಮೆ ನೀಡಲಾಗಿದೆ ಎನ್ನುವ ಮಾತು ಕೇಳಿಬರುತ್ತಿದೆ.ಆದರೆ ಯಾವುದನ್ನು ಕೂಡಾ ನಾವು ಕಡಿಮೆ ಮಾಡಿಲ್ಲ. ಹೊಸ ಬಜೆಟ್ ಮಾತ್ರವಲ್ಲ ಕಾಂಗ್ರೆಸ್ ಪಕ್ಷದ ಹಳೆ ಬಜೆಟ್ ಕೂಡ ಹಾಗೆಯೇ ಮುಂದುವರಿಯುತ್ತದೆ. ಯಾವುದೇ ಕಾರ್ಯಕ್ರಮಕ್ಕೆ ನಿಗದಿಪಡಿಸಿದ ಹಣದಲ್ಲಿ ಬದಲಾವಣೆ ಮಾಡಿಲ್ಲ. ಅಭಿವೃದ್ಧಿ ಕರ್ನಾಟಕದ ಇಮೇಜ್ ಹಾಗೇ ಮುಂದುವರಿಯಬೇಕಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ನಾವು ಮೈತ್ರಿ ಮಾಡಲ್ಲ. ಈ ಬಗ್ಗೆ ದಿನೇಶ್ ಗುಂಡೂರಾವ್ ಕೂಡಾ ಹೇಳಿಕೆ ಹೇಳಿದ್ದಾರೆ. ಆದರೆ, ಸಮ್ಮಿಶ್ರ ಸರಕಾರದಿಂದಾಗಿ ಅವರು ಹೊಂದಾಣಿಕೆ ಮಾಡಿಕೊಂಡರೆ, ಅವರಿಗೇ ಬಿಟ್ಟದ್ದು ಎಂದು ತಿಳಿಸಿದರು.
ಹಿಂದೂಗಳ ನಿರ್ಲಕ್ಷ್ಯವೇ ಕಾಂಗ್ರೆಸ್ ಸೋಲಿಗೆ ಕಾರಣ ಎಂಬ ಭೋಜೇಗೌಡರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಅದು ಭೋಜೇಗೌಡರ ಅಭಿಪ್ರಾಯ. ನಮ್ಮ ಪಕ್ಷದ ಚಿಂತನೆಯೇ ಬೇರೆ ರೀತಿಯಲ್ಲಿತ್ತು. ಯಾಕೆ ಸೋತಿದ್ದೇವೆ ಎಂದು ನಾವು ವಿಶ್ಲೇಷಣೆ ಮಾಡಿದ್ದೇವೆ. ಭೋಜೇಗೌಡರ ಅಭಿಪ್ರಾಯವನ್ನು ನಾವು ಯಾಕೆ ಒಪ್ಪಿಕೊಳ್ಳಬೇಕು ಎಂದು ಪ್ರಶ್ನಿಸಿದರು.