ಕೇರಳ/ಅಲೆಪ್ಪಿ, ಆ10: 96ನೇ ವಯಸ್ಸಿನ ಅಜ್ಜಿಯೊಬ್ಬಳು 4ನೇ ತರಗತಿ ಪರೀಕ್ಷೆ ಬರೆದು ಉತ್ತೀರ್ಣವಾಗಿರುವ ವಿಚಾರವೊಂದು ಬೆಳಕಿಗೆ ಬಂದಿದೆ.
ಕೇರಳದ ಅಲೆಪ್ಪಿ ಸಮೀಪದ ಈ ಅಜ್ಜಿಯ ಹೆಸರು ಕಾತ್ಯಾಯಿನಿ . ಎಳೆಯ ವಯಸ್ಸಿನಲ್ಲಿ ಆರ್ಥಿಕ ತೊಂದರೆಯಿಂದಾಗಿ ಇವರಿಗೆ ಓದಲು ಸಾಧ್ಯವಾಗಿರಲಿಲ್ಲ. ಗಂಡನ ಅಕಾಲಿಕ ಮರಣದ ನಂತರ ಮನೆಗೆಲಸ ಮಾಡಿ ಜೀವನ ನಡೆಸುತ್ತಿದ್ದರು. ಸದ್ಯ 6 ಮಕ್ಕಳ ತಾಯಿಯಾಗಿರುವ ಈ ಅಜ್ಜಿಯ ವಯಸ್ಸು 96. ಆದರೆ ಈ ಇಳಿವಯಸ್ಸಿನಲ್ಲಿ ಇವರಿಗೆ ಕಲಿಕೆಯಲ್ಲಿ ಅಷ್ಟೆ ಹುರುಪು.
ಇದೀಗ ಕೇರಳದ 'ಅಕ್ಷರ ಲಕ್ಷಂ' ಸಾಕ್ಷರತಾ ಯೋಜನೆ ಅಡಿಯಲ್ಲಿ ಅಕ್ಷರ ಕಲಿಯುತ್ತಿರುವ ಅಜ್ಜಿ 4ನೇ ತರಗತಿ ಪರೀಕ್ಷೆ ಬರೆದಿದ್ದಾರೆ. ಇವರ ಜೊತೆಯಲ್ಲಿ ಅನೇಕ ಹಿರಿಯರು ಪರೀಕ್ಷೆ ಬರೆದಿದ್ದಾರೆ. ಮಾತ್ರವಲ್ಲ ಈ ಪರೀಕ್ಷೆಯಲ್ಲಿ ಉತ್ತೀರ್ಣವಾಗಲು ಬೇಕಾದ 30 ಅಂಕ ಗಳಿಸುವಲ್ಲಿ ಕಾತ್ಯಾಯಿನಿ ಅಜ್ಜಿ ಯಶಸ್ವಿಯಾಗಿದ್ದಾರೆ.
ಇವರ ಮಗಳು ಎರಡು ವರ್ಷಗಳ ಹಿಂದೆಯಷ್ಟೇ 10ನೇ ತರಗತಿ ಪರೀಕ್ಷೆ ಬರೆದಿದ್ದರು. ಇದರಿಂದ ಸ್ಪೂರ್ತಿ ಪಡೆದು ಕಾತ್ಯಾಯಿನಿ ಅಜ್ಜಿ ಓದಲು ಮನಸ್ಸು ಮಾಡಿದ್ದು, ಪರೀಕ್ಷೆ ಬರೆಯಲು ಮನಸ್ಸು ಮಾಡಿದ್ದಾರೆ. ಇದೀಗ 5ನೇ ತರಗತಿಗೆ ಪಾಸಾಗಿರುವ ಇವರು 10ನೇ ತರಗತಿಯವರೆಗೆ ಒದುವ ಇಚ್ಛೆ ವ್ಯಕ್ತಪಡಿಸಿದ್ದಾರೆ.