ಮಂಗಳೂರು, ಆ.10: ವಾಯುಭಾರ ಕುಸಿತದಿಂದ ಕರಾವಳಿಯಾದ್ಯಂತ ಕಳೆದೆರಡು ದಿನಗಳಿಂದ ಭಾರೀ ಮಳೆಯಾಗುತ್ತಿದ್ದು, ಹಲವೆಡೆ ತಗ್ಗು ಪ್ರದೇಶಗಳಲ್ಲಿ ಕೃತಕ ನೆರೆ ಕಂಡುಬಂದಿದೆ.
ನಗರದಲ್ಲಿ ಶುಕ್ರವಾರ ಸುರಿದ ಭಾರೀ ಮಳೆಗೆ ಹಲವೆಡೆ ತಗ್ಗು ಪ್ರದೇಶಗಳು ಜಲಾವೃತಗೊಂಡಿದ್ದು, ಮಂಗಳೂರಿನಲ್ಲಿ ಕೃತಕ ನೆರೆ ಉಂಟಾಗಿದೆ. ಅದರಲ್ಲೂ ನಗರದ ಕೊಟ್ಟಾರ ಪರಿಸರವಂತೂ ನೀರು ತುಂಬಿ ಕೆರೆಯಂತಾಗಿದೆ. ಹಲವು ಕಡೆ ಒಳಚರಂಡಿಯಲ್ಲಿ ಹೂಳು ತುಂಬಿರುವ ಕಾರಣ ಮಳೆ ನೀರು ರಸ್ತೆಯಲ್ಲೇ ಹರಿಯುತ್ತಿದ್ದು, ಪಾದಚಾರಿಗಳು, ವಾಹನ ಸವಾರರ ಸಹಿತ ಸಾರ್ವಜನಿಕರು ತೀವ್ರ ತೊಂದರೆಗೊಳಗಾಗಿದ್ದಾರೆ.
ಕೊಟ್ಟಾರ ಪರಿಸರದಲ್ಲಿ ಬೆಳಗ್ಗಿನಿಂದ ಸುರಿಯುತ್ತಿದ್ದ ಧಾರಾಕಾರ ಮಳೆಯಿಂದ ನೀರು ರಸ್ತೆಯಲ್ಲೇ ಹರಿದಿದೆ. ಸೂಕ್ತ ಚರಂಡಿ ವ್ಯವಸ್ಥೆ ಇಲ್ಲದ ಕಾರಣ ಮಳೆ ನೀರು ರಸ್ತೆಯಲ್ಲಿ ನಿಂತಿದ್ದರಿಂದ ವಾಹನ ಸಂಚಾರಕ್ಕೆ ಅಡ್ಡಿಯುಂಟಾಗಿತ್ತು. ಪ್ರಯಾಣಿಕರು ಬಸ್ಸುಗಳನ್ನೇರಲು ತೀವ್ರ ಸಂಕಷ್ಟ ಎದುರಿಸಿದರು.
ತಕ್ಷಣ ಸ್ಥಳಕ್ಕೆ ಧಾವಿಸಿದ ಶಾಸಕ ಡಿ.ವೇದವ್ಯಾಸ ಕಾಮತ್, ಅಧಿಕಾರಿಗಳನ್ನು ಸ್ಥಳಕ್ಕೆ ಕರೆಯಿಸಿ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಲು ಅಗತ್ಯ ಕ್ರಮಗಳನ್ನು ಸೂಚಿಸಿದರು.