ಬಂಟ್ವಾಳ, ಆ.11: ಬಂಟ್ವಾಳ ತಾಲೂಕಿನ ಇತಿಹಾಸ ಪ್ರಸಿದ್ದ, ಸಮುದ್ರ ಮಟ್ಟದಿಂದ ಒಂದು ಸಹಸ್ರ ಅಡಿ ಎತ್ತರದಲ್ಲಿರುವ ಪುಣ್ಯ ಕ್ಷೇತ್ರ ನರಹರಿ ಪರ್ವತ ಶ್ರೀ ಸದಾಶಿವ ದೇಗುಲದಲ್ಲಿ ಆ. 11ರಂದು ಆಟಿ ಅಮಾವಾಸ್ಯೆ ವಿಶೇಷ ತೀರ್ಥ ಸ್ನಾನ ನಡೆಯಿತು.
ಮುಂಜಾನೆ ವೇಳೆ ಶುಭ ಮುಹೂರ್ತದಿಂದ ತೀರ್ಥಸ್ನಾನ ಆರಂಭವಾಗಿದ್ದು, ಮಕ್ಕಳು, ಮಹಿಳೆಯರು, ನೂತನ ವಧುವರರು, ಹಿರಿಯರು ಎನ್ನದೆ ಎಲ್ಲಾ ವರ್ಗದ ಜನ ಕಡಿದಾದ ಬೆಟ್ಟಕ್ಕೆ ಕಾಲ್ನಡಿಗೆಯಲ್ಲಿ ಬಂದು ಸರತಿಸಾಲಲ್ಲಿ ನಿಂತು ತೀರ್ಥವನ್ನು ಮಿಂದು ಶ್ರೀ ಸದಾಶಿವ ದೇವರ ದರ್ಶನ ಪಡೆದರು.
ಅನೇಕ ಮಂದಿ ಕ್ಷೇತ್ರದ ಶಂಖ, ಚಕ್ರ, ಗದಾ, ಪದ್ಮ ತೀರ್ಥಗಳ ನೀರನ್ನು ಸುರಿದುಕೊಂಡು, ದೇವರಿಗೆ ಹಗ್ಗದ ಹರಕೆ, ರುದ್ರಾಭಿಷೇಕ, ಹಣ್ಣುಕಾಯಿ ನಡೆಸಿ ಪ್ರಸಾದ ಸ್ವೀಕರಿಸಿದರು.
ಕರಾವಳಿಯಲ್ಲಿ ಸಂಭ್ರಮದ ತೀರ್ಥಸ್ನಾನ
ಆಟಿ ಅಮಾವಾಸ್ಯೆ ಪ್ರಯುಕ್ತ ಕರಾವಳಿಯ ನಾನಾ ಶಿವ ಕ್ಷೇತ್ರಗಳಲ್ಲಿ ಶನಿವಾರ ತೀರ್ಥ ಸ್ನಾನ ಸಂಭ್ರಮ - ಸಡಗರದೊಂದಿಗೆ ನಡೆಯಿತು. ಐತಿಹಾಸಿಕ ಹಿನ್ನೆಲೆಯ ಮಹತೋಭಾರ ಕಾರಿಂಜ ಶ್ರೀಕಾರಿಂಜೇಶ್ವರ ದೇವಸ್ಥಾನ ಮತ್ತು ನರಹರಿ ಪರ್ವತ ಶ್ರೀ ಸದಾಶಿವ ದೇವಸ್ಥಾನಗಳಲ್ಲಿ ತೀರ್ಥಸ್ನಾನ ವಿಶೇಷ ಸ್ಥಾನ ಪಡೆದಿದ್ದು, ನಸುಕಿನ ಜಾವದಿಂದಲೇ ಇಲ್ಲಿಗೆ ಊರ- ಪರವೂರ ಅಸಂಖ್ಯಾತ ಭಕ್ತಾದಿಗಳು ಬಂದು ತೀರ್ಥಸ್ನಾನ ಮಾಡುತ್ತಿದ್ದಾರೆ.
ಸಮುದ್ರ ಮಟ್ಟದಿಂದ ಸಾವಿರಾರು ಅಡಿ ಎತ್ತರದಲ್ಲಿರುವ ಶ್ರೀಕಾರಿಂಜೇಶ್ವರ ದೇವಸ್ಥಾನ ಮತ್ತು ನರಹರಿ ಪರ್ವತ ಶ್ರೀ ಸದಾಶಿವ ಕ್ಷೇತ್ರಗಳ ಪವಿತ್ರ ತೀರ್ಥಕೆರೆಗಳಲ್ಲಿ ಮಿಂದು ದೇವರ ದರ್ಶನ ಪಡೆದರೆ ಸಕಲ ಇಷ್ಟಾರ್ಥ ಸಿದ್ಧಿಯಾಗುತ್ತದೆ ಎನ್ನುವುದು ಭಕ್ತರ ಅನಾದಿ ಕಾಲದ ನಂಬಿಕೆಯಾಗಿದ್ದು, ಪ್ರತಿ ವರ್ಷದಂತೆ ಈ ವರ್ಷವೂ ಭಕ್ತರು ಸರತಿ ಸಾಲಿನಲ್ಲಿ ನಿಂತು ತೀರ್ಥ ಸ್ನಾನದಲ್ಲಿ ಪಾಲ್ಗೊಂಡರು. ಬಳಿಕ ದೇವರ ದರ್ಶನ ಪಡೆದರು.