ನವದೆಹಲಿ, ಆ.11: ಮಹಾಮಳೆಯಿಂದ ಪ್ರವಾಹಕ್ಕೆ ತುತ್ತಾಗಿರುವ ಕೇರಳದಲ್ಲಿ ಭಾರತೀಯ ಸೇನೆ ಮತ್ತು ಎನ್ ಡಿಆರ್ ಎಫ್ ನಡೆಸುತ್ತಿರುವ ರಕ್ಷಣಾ ಕಾರ್ಯಾಚರಣೆಯಲ್ಲಿ ಸಾಥ್ ನೀಡುವಂತೆ ಕಾಂಗ್ರೆಸ್ ಕಾರ್ಯಕರ್ತರಿಗೆ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಸೂಚನೆ ನೀಡಿದ್ದಾರೆ.
ಕೇರಳದಲ್ಲಿ ನಿಜಕ್ಕೂ ಪ್ರಕೃತಿ ಮಾತೆ ಮುನಿದಿದ್ದು, ಅಪಾರ ಪ್ರಮಾಣದ ಹಾನಿ ಸಂಭವಿಸಿದೆ. ಸಂತ್ರಸ್ಥರ ನೆರವಿಗೆ ಕಾಂಗ್ರೆಸ್ ಸದಾ ಇದ್ದು, ಕೂಡಲೇ ಕಾರ್ಯಕರ್ತರು ಸಂತ್ರಸ್ಥರ ನೆರವಿಗೆ ಧಾವಿಸಿ. ಅಪಾಯದಲ್ಲಿರುವವರ ರಕ್ಷಿಸಿ, ಅವರಿಗೆ ನೆರವಾಗಿ ಎಂದು ಟ್ವೀಟ್ ಮೂಲಕ ಸೂಚನೆ ನೀಡಿದ್ದಾರೆ. ಜೊತೆಗೆ, ಪ್ರಸ್ತುತ ರಕ್ಷಣಾ ಕಾರ್ಯಾಚರಣೆಯಲ್ಲಿರುವ ಸೇನೆ ಹಾಗೂ ಎನ್ ಡಿಆರ್ ಎಫ್ ತಂಡಕ್ಕೂ ಸಾಥ್ ನೀಡಿ ಎಂದು ಹೇಳಿದ್ದಾರೆ.
ಕಳೆದೊಂದು ವಾರದಿಂದ ಎಡೆಬಿಡದೇ ಸುರಿಯುತ್ತಿರುವ ಮಳೆ ಕಾರಣ ಕೇರಳದಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದ್ದು, ವಿವಿಧ ಮಳೆ ಸಂಬಂಧಿತ ಪ್ರಕರಣಗಳಲ್ಲಿ ಈ ವರೆಗೂ ಸಾವನ್ನಪ್ಪಿರುವವರ ಸಂಖ್ಯೆ 29ಕ್ಕೆ ಏರಿಕೆಯಾಗಿದೆ. ಅಲ್ಲದೆ ಕೇರಳದಾದ್ಯಂತ ಸುಮಾರು 54,000 ಮಂದಿ ಮನೆಮಠ ಕಳೆದುಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ಪ್ರವಾಹ ಪೀಡಿತ ಪ್ರದೇಶಗಳಲ್ಲಿ ವಾಸವಿದ್ದ 10 ಸಾವಿರಕ್ಕೂ ಹೆಚ್ಚು ಜನರನ್ನು ಸುರಕ್ಷಿತ ಸ್ಥಳಗಳಿಗೆ ರವಾನಿಸಲಾಗಿದೆ. ಸೇನೆ ಮತ್ತು ರಾಷ್ಟ್ರೀಯ ವಿಪತ್ತು ನಿರ್ವಹಣಾ ಘಟಕದ ತಂಡಗಳು ಹಗಲಿರುಳೆನ್ನದೆ ರಕ್ಷಣಾ ಕಾರ್ಯದಲ್ಲಿ ತೊಡಗಿವೆ. ಕೇಂದ್ರ ಮತ್ತು ದೇಶದ ಹಲವು ರಾಜ್ಯಗಳು ಕೇರಳಕ್ಕೆ ನೆರವಿನ ಹಸ್ತ ಚಾಚಿವೆ.