ಬಂಟ್ವಾಳ, ಆ 12: ಮನುಷ್ಯ ರೀತಿ ಹೋಲುವ ಗೊಂಬೆಯೊಂದು ಹಠಾತಾಗಿ ಪ್ರತ್ಯಕ್ಷವಾದ ಘಟನೆ ರಾಷ್ಟ್ರೀಯ ಹೆದ್ದಾರಿಯ ಬಿ.ಸಿ.ರೋಡಿನ ಮುಖ್ಯ ರಸ್ತೆಯಲ್ಲಿ ಆ.11ರ ಶನಿವಾರ ಸಂಜೆ ನಡೆದಿದೆ.
ಬಿ.ಸಿ.ರೋಡ್ನ ಮುಖ್ಯ ರಸ್ತೆಯು ಹೊಂಡಗಳಿಂದ ಕೂಡಿದ್ದು, ಸಂಚಾರಕ್ಕೆ ಅಯೋಗ್ಯವಾಗಿದೆ. ಈ ನಿಟ್ಟಿನಲ್ಲಿ ಪ್ರತಿನಿಧಿಗಳ ಹಾಗೂ ಅಧಿಕಾರಿಗಳ ಗಮನ ಸೆಳೆಯಲು ಸ್ಥಳೀಯರು ಗೊಂಬೆಯೊಂದನ್ನು ರಸ್ತೆಯ ಗುಂಡಿಯೊಂದರಲ್ಲಿ ಇಡುವ ಮೂಲಕ ವಾಹನ ಸವಾರರ ಗಮನ ಸೆಳೆದಿದ್ದರು.ಈ ಗೊಂಬೆಯನ್ನು ಕಂಡ ವಾಹನ ಸವಾರರರು ವಾಹನವನ್ನು ರಸ್ತೆಯಲ್ಲಿಯೇ ನಿಲ್ಲಿಸಿದ ಪರಿಣಾಮವಾಗಿ ಸುಮಾರು ಅರ್ಧ ತಾಸುಗಳ ಕಾಲ ವಾಹನ ದಟ್ಟನೆ ಉಂಟಾಯಿತು. ನಂತರ ಗೊಂಬೆಯನ್ನು ತೆರವುಗೊಳಿಸಲಾಯಿತು.
ಗೊಂಬೆಯೋ ಅಥವಾ ಮನುಷ್ಯನೋ?:
ಸ್ಥಳೀಯರು ಮನುಷ್ಯನ ರೀತಿಯ ಗೊಂಬೆಯೊಂದನ್ನು ತಯಾರಿಸಿ ಬಿಳಿ ಪ್ಯಾಂಟ್, ಬಿಳಿ ಕುರ್ತಾ ಹಾಕಿ, ತಲೆಗೆ ಹೆಲ್ಮೆಟ್ ಇಟ್ಟು, ಕೊರಳಿಗೆ ಹಾರ ಹಾಕಲಾಯಿತು. ಅದಕ್ಕೊಂದು ಸ್ಲೇಟನ್ನು ನೇತು ಹಾಕಿ ಅದರಲ್ಲಿ ಹೀಗೂ ಉಂಟೇ ಎಂದು ಬರೆದ ಗೊಂಬೆ ವಾಹನ ಸವಾರರ ಗಮನವನ್ನೂ ಸೆಳೆಯಿತು. ಇದು ಗೊಂಬೆಯೋ ಅಥವಾ ಮನುಷ್ಯಯೋ ಎಂಬ ಬಗ್ಗೆ ವಾಹನ ಸವಾರರು ಗೊಂದಲಕ್ಕೀಡಾದರು.