ಕಡಬ, ಆ 12: ಮೊಬೈಲ್ ನಲ್ಲಿ ಬಂದ ಮೆಸೇಜ್ ನಂಬಿ ಕಾರು ಸಿಗುತ್ತದೆ ಎಂದು ಹಣ ತೆತ್ತು ಮಹಿಳೆಯೊಬ್ಬರು ಮೋಸ ಹೋದ ಘಟನೆ ಬೆಳಕಿಗೆ ಬಂದಿದೆ. ಕಡಬದ ತಾಲೂಕಿನ ಕೋಡಿಂಬಾಲ ನಿವಾಸಿ ನಾಗರತ್ನ ಮೋಸ ಹೋದ ಮಹಿಳೆ. ತಾನು ಮೊಬೈಲ್ ಗೆ ಬಂದ ಮೆಸೇಜ್ ನ್ನು ಸತ್ಯವೆಂದು ನಂಬಿ ಸುಮಾರು 25,900 ರೂ ಕಳೆದುಕೊಂಡೆ ಎಂದು ಮಹಿಳೆ ನಾಗರತ್ನ ಅವರು ಪ್ರಧಾನಿ ನರೇಂದ್ರ ಮೋದಿಯವರಿಗೆ ದೂರು ನೀಡಿದ್ದು ಪ್ರಧಾನಿ ಕಾರ್ಯಾಲಯದಿಂದ ಕಡಬ ಠಾಣೆಗೆ ಸೂಚನೆ ಬಂದ ಮೇರೆಗೆ ಪೊಲೀಸರು ಶನಿವಾರ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಏಪ್ರಿಲ್ ನಲ್ಲಿ ಕೋಡಿಂಬಾಳ ನಿವಾಸಿ ನಾಗರತ್ನಾ ಅವರು ಸುಮಾರು 25,900 ಕಳಕೊಂಡಿದ್ದರು. ಅವರ ಮೊಬೈಲ್ ಗೆ ಒಂದು ಮೆಸೇಜ್ ಬಂದಿದ್ದು, ಅದರಲ್ಲಿ ನಿಮ್ಮ ಮೊಬೈಲ್ ನಂಬರ್ ಗೆ ಲಕ್ಕಿ ಡ್ರಾ ಮೂಲಕ ಸಫಾರಿ ಕಾರು ಒಲಿದಿದೆ. ಇದನ್ನು ಪಡೆಯಲು 6,600 ಪಾವತಿಸಬೇಕು ಎಂದು ತಿಳಿಸಿ ಜಾರ್ಖಂಡ್ ನ ಬ್ಯಾಂಕ್ ಖಾತೆಯ ವಿವರ ನೀಡಲಾಗಿತ್ತು. ಈ ವಿಚಾರವನ್ನು ಯಾರಿಗೂ ಹೇಳದೆ ಮುಚ್ಚಿಟ್ಟ ನಾಗರತ್ನ ಅವರು ಪತಿಗೂ ತಿಳಿಸದೆ ಜಾರ್ಖಂಡ್ ನ ಬ್ಯಾಂಕ್ ಖಾತೆಗೆ ಹಣ ಜಮಾ ಮಾಡಿದ್ದಾರೆ.
ಸ್ವಲ್ಪ ದಿನದ ಬಳಿಕ ಮತ್ತೊಂದು ಮೆಸೇಜ್ ಬಂದಿದ್ದು, ಅದರಲ್ಲಿ ನಮ್ಮ ಕಾರಿನ ಬೆಲೆ 12 ಲಕ್ಷ ರೂಪಾಯಿ, ನಾವು ಕಾರಿನ ಬದಲು 12 ಲಕ್ಷ ರೂಪಾಯಿಯನ್ನು ನಿಮ್ಮ ಖಾತೆಗೆ ಜಮಾ ಮಾಡುತ್ತೇವೆ. ಆದರೆ ಅದಕ್ಕೆ 12 ಸಾವಿರ ರೂಪಾಯಿಯನ್ನು ನಮ್ಮ ಖಾತೆಗೆ ಜಮೆ ಮಾಡಿ ಎಂದು ಸಂದೇಶ ಬಂದಿತ್ತು. ಹೇಗೂ 12 ಲಕ್ಷ ರೂಪಾಯಿ ಬರುತ್ತದೆ ಎಂದುಕೊಂಡಿದ್ದ ಅವರು ಮತ್ತೆ ಹಣ ಪಾವತಿ ಮಾಡಿದರು. ಮತ್ತೊಮ್ಮೆ 12 ಲಕ್ಷವನ್ನು ಕಳುಹಿಸಿ ಕೊಡಲು 6000 ರೂ ಫೀಸ್ ಕಟ್ಟಿ ಎಂದು ಹೇಳಲಾಗಿತ್ತು. ಅದಕ್ಕೂ ಒಪ್ಪಿದ ನಾಗರತ್ನ 6000 ಪಾವತಿಸಿದ್ದಾರೆ. ಕೊನೆಗೂ ತಾನು ಮೋಸ ಹೋಗುತ್ತಿರುವ ಬಗ್ಗೆ ಅರಿವಾಗುವ ವೇಳೆಗೆ 23,900 ರು ಪಾವತಿಯಾಗಿತ್ತು. ಮತ್ತೆ ಮೆಸೇಜ್ ಬಂದರೂ ಉತ್ತರಿಸುವ ಧೈರ್ಯ ತೋರದ ನಾಗರತ್ನ ಸುಮ್ಮನಾಗಿದ್ದಾರೆ. ಇಷ್ಟೆಲ್ಲಾ ನಡೆದ ಬಳಿಕ ಕಳೆದೆರಡು ದಿನಗಳ ಹಿಂದೆ ಪ್ರಧಾನಿಯವರಿಗೆ ನಾಗರತ್ನ ದೂರು ನೀಡಿದ್ದರು. ಪ್ರಧಾನಿ ಕಾರ್ಯಾಲಯದಿಂದ ಈ ಕುರಿತು ತನಿಖೆ ನಡೆಸುವಂತೆ ಠಾಣೆಗೆ ಪತ್ರ ಬಂದಿದೆ. ಈ ಹಿನ್ನಲೆಯಲ್ಲಿ ಕಡಬ ಠಾಣೆಯಲ್ಲಿ ಮೋಸ ಪ್ರಕರಣ ದಾಖಲಾಗಿದೆ.