ಬೆಳ್ತಂಗಡಿ, ಅ 12: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವರುಣನ ಆರ್ಭಟ ಮುಂದುವರೆದಿದ್ದು, ವೃದ್ಧರೊಬ್ಬರು ಕಾಲುಸಂಕ ದಾಟುತ್ತಿದ್ದಾಗ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ನೀರುಪಾಲಾಗಿರುವ ಘಟನೆ ವೇಣೂರು ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಭಾನುವಾರ ಸಂಜೆ ನಡೆದಿದೆ.
ಬೆಳ್ತಂಗಡಿಯ ಮರೋಡಿ ಗ್ರಾಮದ ಕಂಬಳದಡ್ಡ ನಿವಾಸಿ ಬೊಮ್ಮಯ್ಯದಾಸ(65) ಎಂಬವರು ನೀರುಪಾಲಾದವರು. ಇವರು ತನ್ನ ಮನೆಯ ಸನಿಹದ ತೋಡೊಂದಕ್ಕೆ ಇನ್ನೊಂದು ಬದಿಯ ಸಂಪರ್ಕಕ್ಕೆ ಹಾಕಿದ ಕಾಲು ಸಂಕವನ್ನು ದಾಟುವಾಗ ಜಾರಿ ಬಿದ್ದಿದ್ದಾರೆ. ಮಳೆಯಿಂದಾಗಿ ತೋಡಿನಲ್ಲಿ ಭಾರೀ ನೀರು ಹರಿಯುತ್ತಿದ್ದ ಕಾರಣ ಕೊಚ್ಚಿಕೊಂಡು ಹೋಗಿದ್ದಾರೆ. ಮನೆಯ ಸನಿಹವೇ ಸಂಕ ಇದ್ದುದರಿಂದ ಮನೆಯವರು ನೋಡುತ್ತಿದ್ದಂತೆಯೇ ಈ ಘಟನೆ ನಡೆದಿದೆ. ವೇಣೂರು ಪೋಲಿಸರು, ಅಗ್ನಿಶಾಮಕ ದಳದ ಸಿಬ್ಬಂದಿಗಳು ಶೋಧ ನಡೆಸಿದರಾದರೂ ಸಂಜೆವರೆಗೂ ಪತ್ತೆಯಾಗಿಲ್ಲ. ಶೋಧ ಕಾರ್ಯವನ್ನು ನಾಳೆ ಮುಂದುವರಿಸಲಿದ್ದಾರೆ.