ಮಂಗಳೂರು, ಆ 13: ನಂತೂರಿನಲ್ಲಿ ಮಹಿಳೆಯೊಬ್ಬರು ಚಲಾಯಿಸುತ್ತಿದ್ದ ಸ್ಕೂಟರ್ಗೆ ಖಾಸಗಿ ಎಕ್ಸ್ಪ್ರೆಸ್ ಬಸ್ ಢಿಕ್ಕಿ ಹೊಡೆದು ಸಂಭವಿಸಿದ ಅಪಘಾತದಲ್ಲಿ ಅವರ ಪುತ್ರಿ ಸಾವನ್ನಪ್ಪಿದ್ದು, ಆಕೆ ಮತ್ತು ಓರ್ವ ಪುತ್ರ ಗಾಯಗೊಂಡಿರುವ ಘಟನೆ ಆ. 12ರ ಭಾನುವಾರ ನಡೆದಿದೆ.
ಮೂಲತಃ ಶಿವಮೊಗ್ಗ ನಿವಾಸಿಯಾಗಿದ್ದು, ಪ್ರಸ್ತುತ ಸುರತ್ಕಲ್ ಸಮೀಪದ ಕಾಟಿಪಳ್ಳ ಕೃಷ್ಣಾಪುರ 4ನೇ ಕ್ರಾಸ್ನಲ್ಲಿ ವಾಸವಾಗಿರುವ ರೋಶನ್- ನೂರ್ ಜಹಾನ್ ದಂಪತಿಯ ಪುತ್ರಿ ಮಧಿಹಾ (11) ಮೃತ ಬಾಲಕಿ. ನೂರ್ಜಹಾನ್ ಮತ್ತು ಆಕೆಯ 4 ವರ್ಷದ ಪುತ್ರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.
ಇವರು ಮೂಲತಃ ಶಿವಮೊಗ್ಗ ನಿವಾಸಿಗಳಾಗಿದ್ದು, ಒಂದು ತಿಂಗಳ ಹಿಂದೆಯಷ್ಟೇ ಸುರತ್ಕಲ್ ಗೆ ಬಂದು ಬಾಡಿಗೆ ಮನೆಯಲ್ಲಿ ವಾಸ್ತವ್ಯ ಮಾಡುತ್ತಿದ್ದಾರೆ. ರೋಶನ್ ಅವರು ಬೆಂಗಳೂರಿನಲ್ಲಿ ಉದ್ಯೋಗದಲ್ಲಿದ್ದು, ಅವರ ಹಿರಿಯ ಪುತ್ರಿ ಕೂಡ ಬೆಂಗಳೂರಿನಲ್ಲಿ ಓದುತ್ತಿದ್ದಾಳೆ. ಪತ್ನಿ ನೂರ್ ಜಹಾನ್ ಅವರು ಓರ್ವ ಪುತ್ರಿ ಮತ್ತು ಓರ್ವ ಪುತ್ರನ ಜತೆ ಕೃಷ್ಣಾಪುರದಲ್ಲಿ ವಾಸವಾಗಿದ್ದಾರೆ. ಸುಮಾರು ಒಂದು ತಿಂಗಳ ಹಿಂದೆಯಷ್ಟೇ ಈ ಕುಟುಂಬ ಶಿವಮೊಗ್ಗದಿಂದ ಸುರತ್ಕಲ್ಗೆ ಬಂದು ಬಾಡಿಗೆ ಮನೆಯಲ್ಲಿ ವಾಸ್ತವ್ಯ ಮಾಡಲು ಆರಂಭಿಸಿದ್ದರು.
ಭಾನುವಾರ ಮಧ್ಯಾಹ್ನ ನೂರ್ ಜಹಾನ್ ಮಕ್ಕಳೊಂದಿಗೆ ಮದುವೆ ಸಮಾರಂಭದಲ್ಲಿ ಭಾಗವಹಿಸಲು ಸ್ಕೂಟರ್ ನಲ್ಲಿ ಹೋಗುತ್ತಿದ್ದರು. ನಂತೂರು ಸಮೀಪದ ಫರ್ನೀಚರ್ ಮಳಿಗೆಯೊಂದರ ಮುಂದೆ ಹೋಗುತ್ತಿದ್ದಾಗ ಉಡುಪಿಯಿಂದ ಮಂಗಳೂರಿಗೆ ಬರುತ್ತಿದ್ದ ಖಾಸಗಿ ಎಕ್ಸ್ಪ್ರೆಸ್ ಬಸ್ ಓವರ್ ಟೇಕ್ ಮಾಡುವ ಧಾವಂತದಲ್ಲಿ ಸ್ಕೂಟರ್ ಗೆ ಡಿಕ್ಕಿ ಹೊಡೆದಿದೆ. ಆಗ ಸ್ಕೂಟರ್ ರಸ್ತೆಗೆ ಮಗುಚಿ ಬಿದ್ದು, ಸ್ಕೂಟರ್ ಮಗುಚಿ ಸವಾರೆ ನೂರ್ ಜಹಾನ್ ಮತ್ತು ಇಬ್ಬರು ಮಕ್ಕಳು ಗಾಯಗೊಂಡರು. ಈ ಸಂದರ್ಭ ಮದಿಯಾ ಅವರ ತಲೆಗೆ ತೀವ್ರ ಗಾಯಗಳಾಗಿದ್ದು, ಕೂಡಲೇ ಖಾಸಗಿ ಆಸ್ಪತ್ರೆಗೆ ಕರೆದೊಯ್ದರೂ ಯಾವುದೇ ಪ್ರಯೋಜನವಾಗಿಲ್ಲ.
ಈ ಬಗ್ಗೆ ಕದ್ರಿ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.