ಬೆಳ್ತಂಗಡಿ, ಆ 13:ಮುಖ್ಯಮಂತ್ರಿ ಹೆಚ್.ಡಿ. ಕುಮಾರ ಸ್ವಾಮಿ ಇಂದು ಶ್ರೀ ಕ್ಷೇತ್ರ ಧರ್ಮಸ್ಥಳ್ಕೆ ಭೇಟಿ ನೀಡಿದ್ದಾರೆ. ಹಾಸನದಿಂದ ರಸ್ತೆ ಮಾರ್ಗವಾಗಿ ಆಗಮಿಸಿದ ಸಿಎಂ ಸಂಜೆ 7 ಗಂಟೆಯ ಬಳಿಕ ಧರ್ಮಸ್ಥಳಕ್ಕೆ ತಲುಪಿದ್ದಾರೆ. ಭಾರೀ ಮಳೆಯ ನಡುವೆಯೇ ಚಾರ್ಮಾಡಿ ಮೂಲಕ ರಸ್ತೆ ಮಾರ್ಗವಾಗಿ ಸಿಎಂ ಆಗಮಿಸಿದ್ದಾರೆ. ಧರ್ಮಸ್ಥಳದಲ್ಲಿ ಸಿಎಂಗೆ ಹರ್ಷೇಂದ್ರ ಕುಮಾರ್ ಭವ್ಯ ಸ್ವಾಗತ ನೀಡಿದರು. ಸಿಎಂ ಕುಮಾರಸ್ವಾಮಿ, ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಕುಟುಂಬ ಸಮೇತರಾಗಿ ದೇವಾಲಯಕ್ಕೆ ಭೇಟಿ ನೀಡಿದ್ದಾರೆ.
ಭಾರೀ ಮಳೆಯ ಹಿನ್ನೆಲೆಯಲ್ಲಿ ಧರ್ಮಸ್ಥಳಕ್ಕೆ ಸಿಎಂ ಭೇಟಿ ಸಮಯದಲ್ಲಿ ವ್ಯತ್ಯಯವಾಗಿದೆ. ರಾತ್ರಿ 9 ಗಂಟೆಗೆ ದೇವಸ್ಥಾನಕ್ಕೆ ಸಿಎಂ ಕುಟುಂಬ ಭೇಟಿ ನೀಡಿದ್ದು, ಶ್ರೀ ಮಂಜುನಾಥ ಸ್ವಾಮಿಯ ದರುಷನ ಪಡೆದಿದ್ದಾರೆ. ಬಳಿಕ ಶ್ರೀ ಮಂಜುನಾಥ ಸ್ವಾಮಿಗೆ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಇನ್ನು ನಾಳೆ ಸಿಎಂ ಕುಟುಂಬ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ದೇವರ ದರುಷಣ ಪಡೆದು ವಿಶೇಷ ಪೂಜೆ ಸಲ್ಲಿಸಲಿದ್ದಾರೆ.
ಸಿಎಂಗೆ ಮನವಿ ಸಲ್ಲಿಸಿದ ಶಾಸಕ ಹರೀಶ್ ಪೂಂಜಾ:
ಇನ್ನು ಧರ್ಮಸ್ಥಳಕ್ಕೆ ಸಿಎಂ ಕುಮಾರಸ್ವಾಮಿ ಆಗಮಿಸಿದ ಸಂದರ್ಭದಲ್ಲಿ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿದರು. ಈ ವೇಳೆ ತಾಲೂಕು ಹಾಗೂ ಜಿಲ್ಲೆಯಲ್ಲಿನ ಪ್ರಮುಖ ಬೇಡಿಕೆಗಳ ಕುರಿತಂತೆ ಸಿಎಂಗೆ ಮನವಿ ಸಲ್ಲಿಸಿದರು.
ಮಳೆ ಹಾನಿಗೆ 1 ಸಾವಿರ ಕೋಟಿ ರೂಪಾಯಿ ಪರಿಹಾರ ಬಿಡುಗಡೆಗೊಳಿಸಬೇಕು. ಅಡಿಕೆ ಬೆಳೆಗಾರರಿಗೆ ಕೊಳೆರೋಗ ನಷ್ಟ ಪರಿಹಾರವನ್ನು ಒದಗಿಸಬೇಕು. ಕಸ್ತೂರಿ ರಂಗನ್ ವಸ್ತು ನಿಷ್ಠ ವರದಿ ನೀಡಲು ಹಾಗೂ ಆಗಸ್ಟ್ 25ರೊಳಗೆ ಸುಪ್ರೀಂಕೋರ್ಟ್ ಗೆ ವರದಿ ನೀಡುವಂತೆ ಮನವಿಯಲ್ಲಿ ಒತ್ತಾಯಿಸಲಾಯಿತು. ಅಲ್ಲದೆ ಎಂಡೋ ಪೀಡಿತರಿಗೆ ಮೂಲಭೂತ ಸೌಕರ್ಯ ಒದಗಿಸುವಂತೆ ಮನವಿ ಮಾಡಲಾಯಿತು.